ಹಾನಗಲ್ಲ: ತಾಲೂಕಿನ ಡೊಳ್ಳೇಶ್ವರ ಗ್ರಾಮದ ಜನ ತಾಲೂಕು ಕೇಂದ್ರಕ್ಕೆ ತೆರಳುವ ರಸ್ತೆಯ ದುಸ್ಥಿತಿ ಹೇಳತೀರದಾಗಿದೆ.
ಪಟ್ಟಣದಿಂದ 3 ಕಿ.ಮೀ. ದೂರದಲ್ಲಿರುವ ಡೊಳ್ಳೇಶ್ವರ ಗ್ರಾಮ ಸಂರ್ಪಸಲು ಧರ್ವ ಕಾಲುವೆಯ ಮೇಲಿನ ರಸ್ತೆಯನ್ನೇ ಗ್ರಾಮಸ್ಥರು ಅವಲಂಬಿಸಿದ್ದಾರೆ. ಕಳೆದ ಒಂದು ದಶಕದ ಹಿಂದೆ ಈ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿತ್ತು. ಆದರೆ, ಅಧಿಕ ವಾಹನಗಳ ಸಂಚಾರ ಮತ್ತು ಕಳಪೆ ಕಾಮಗಾರಿಯಿಂದಾಗಿ ರಸ್ತೆಯ ಬಹುಭಾಗ ಕಿತ್ತು ಹೋಗಿದೆ. ಇದರಿಂದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ಡೊಳ್ಳೇಶ್ವರದಿಂದ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಹಾನಗಲ್ಲಿನ ಶಾಲಾ-ಕಾಲೇಜ್ಗಳಿಗೆ ಇದೇ ಮಾರ್ಗದಲ್ಲಿ ತೆರಳುತ್ತಾರೆ. ಹಾನಗಲ್ಲಿನಿಂದ ಡೊಳ್ಳೇಶ್ವರಕ್ಕೆ ಬಸ್ ಸೌಲಭ್ಯ ಇಲ್ಲದಿರುವುದರಿಂದ ಸ್ವಂತ ವಾಹನಗಳಿಲ್ಲದ ಗ್ರಾಮಸ್ಥರು ಒಂದೂವರೆ ಕಿ.ಮೀ. ನಡೆದುಕೊಂಡೇ ತೆರಳಬೇಕಾಗಿದೆ. ರೈತರು ರಸಗೊಬ್ಬರ, ಕ್ರಿಮಿನಾಶಕ, ಮತ್ತಿತರ ಕೃಷಿ ಪರಿಕರಗಳಿಗಾಗಿ ಹಾನಗಲ್ಲನ್ನೇ ಅವಲಂಬಿಸಿದ್ದಾರೆ. ಇಂಥ ಅನಿವಾರ್ಯತೆಗಳಿದ್ದರೂ ಯಾವ ಜನಪ್ರತಿನಿಧಿಯೂ ಈ ರಸ್ತೆಯ ದುರಸ್ತಿಯ ಅಗತ್ಯತೆಯ ಬಗ್ಗೆ ಚಿಂತನೆ ನಡೆಸದಿರುವುದು ದುರದೃಷ್ಟಕರ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕು ಕೇಂದ್ರ ಹಾನಗಲ್ಲಿಗೆ ಕೂಗಳತೆಯಲ್ಲಿರುವ ಡೊಳ್ಳೇಶ್ವರ ಗ್ರಾಮ ರಸ್ತೆ ಸಂಪರ್ಕದ ಸಮಸ್ಯೆ ಎದುರಿಸುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿ ಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಡಾಂಬರೀಕರಣಗೊಂಡ ರಸ್ತೆಯ ನಿರ್ವಹಣೆ ಮಾಡದಿರುವುದರಿಂದ ಈ ಸ್ಥಿತಿ ಎದುರಾಗಿದೆ. ನಮ್ಮ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅನುದಾನದ ಕೊರತೆ ನೆಪ ಮುಂದಿಟ್ಟು ಜಾರಿಕೊಳ್ಳುತ್ತಿದ್ದಾರೆ. | ಬಸವರಾಜ ಕೊಪ್ಪದ ಡೊಳ್ಳೇಶ್ವರ ರೈತ