ಜಿಲ್ಲೆ

ನದಿ ನೀರಿನ ಮಟ್ಟ ಇಳಿಕೆ

Davangere - Desk - Ganesh M K

ಹೊನ್ನಾಳಿ: ಮಲೆನಾಡು ಹಾಗೂ ತಾಲೂಕಿನಾದ್ಯಂತ ಕಳೆದ ಐದಾರು ದಿನಗಳಿಂದ ಸುರಿಯುತ್ತಿದ್ದ ಮಳೆ ಗುರುವಾರ ಸ್ವಲ್ಪ ಬಿಡುವು ನೀಡಿದಂತಿದೆ. ತಾಲೂಕಿನಾದ್ಯಂತ ಬೆಳಗ್ಗೆಯಿಂದ ಆಗೊಮ್ಮೆ ಈಗೊಮ್ಮೆ ಮಳೆ ಬೀಳುತ್ತಿದೆ.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವ ಕಾರಣ ತುಂಗಭದ್ರಾ ನದಿ ನೀರಿನ ಮಟ್ಟ ಗುರುವಾರವೂ ಏರಿಕೆ ಕಂಡಿಲ್ಲ. ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಮನೆಗಳಿಗೆ ಹಾನಿ: ತಾಲೂಕಿನ ಬೆನಕನಹಳ್ಳಿ ಹಾಗೂ ಕುಂದೂರು ಗ್ರಾಮಗಳಲ್ಲಿ ತಲಾ ಎರಡು ಮನೆ ಹಾಗೂ ಹೊನ್ನಾಳಿ ಪಟ್ಟಣದಲ್ಲಿ ಒಂದು ಮನೆ ಸೇರಿ ಐದು ಮನೆಗಳು ಹಾನಿಯಾಗಿವೆ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ಮಾಹಿತಿ ನೀಡಿದರು.

ನದಿ ನೀರಿನ ಮಟ್ಟ ಇಳಿಕೆ: ಕಳೆದ ಒಂದು ವಾರದಿಂದ ಚಿಕ್ಕಮಗಳೂರು, ಶಿವಮೊಗ್ಗ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಾದ್ಯಂತ ಸುರಿದ ಮಳೆಯಿಂದ ತುಂಗಭದ್ರಾ ನದಿ ನೀರಿನ ಮಟ್ಟ ದಿನೇ ದಿನೆ ಏರಿತ್ತು.

ಆದರೆ, ಬುಧವಾರ, ಗುರುವಾರ ಮಳೆ ಪ್ರಮಾಣ ಕಡಿಮೆಯಾಗಿದ್ದ ಕಾರಣ ನದಿ ನೀರಿನ ಮಟ್ಟವೂ ಇಳಿದಿದೆ. 9,850 ಮಿ.ಮೀ. ಇದ್ದ ನದಿ ನೀರಿನ ಮಟ್ಟ ಗುರುವಾರ 8,600 ಮಿ.ಮೀ. ಇದೆ. ಒಂದೇ ದಿನಕ್ಕೆ ಒಂದು ಮೀಟರ್‌ನಷ್ಟು ನದಿ ನೀರು ಕಡಿಮೆಯಾಗಿದೆ.