ಜಿಲ್ಲೆ

ಅತಿವೃಷ್ಟಿಯಿಂದ ಅಡಕೆ ಬೆಳೆಗೆ ಹಾನಿ

ಉತ್ತರ ಕನ್ನಡ ಡೆಸ್ಕ್

ಶಿರಸಿ: ಈ ವರ್ಷದ ಅತಿವೃಷ್ಟಿಯಿಂದಾಗಿ ಅಡಕೆ ಬೆಳೆಗೆ ಗಣನೀಯ ಹಾನಿ ಉಂಟಾಗಿದೆ. ಸಂಘವು ರೈತರ ಸಂಕಷ್ಟಕ್ಕೆ ಸ್ಪಂದಿಸಲಿದೆ ಎಂದು ಟಿಆರ್‌ಸಿ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಟಿಆರ್‌ಸಿಯ 111ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಸಂಘವು ತನ್ನ ಪ್ರಾರಂಭಿಕ ಕಾಲದಿಂದಲೂ ಇಂತಹ ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ. ಸಂಘದ ಸದಸ್ಯರಿಗೆ ಕಳೆದ ಹಲವಾರು ವರ್ಷಗಳಿಂದ ಬೆಳೆ ವಿಮೆ ಯೋಜನೆಯ ಗರಿಷ್ಠ ಪ್ರಯೋಜನ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತ ಬಂದಿದೆ ಎಂದರು.

ಸಹಕಾರ ಸಂಘಗಳ ಮೂಲಸೌಕರ್ಯದ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವು ಸಹಕಾರ ಸಂಘಗಳ ಮೇಲೆ ವಿವಿಧ ರೀತಿಯಲ್ಲಿ ಹಿಡಿತ ಸಾಧಿಸಲು ಹೊರಟಿದೆ. ಅದರ ಭಾಗವಾಗಿ ಎಲ್ಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಾಮನ್ ಸಾಫ್ಟ್‌ವೇರ್ ಅಳವಡಿಸಲಾಗುತ್ತಿದೆ. ಇದು ಭವಿಷ್ಯದ ದೃಷ್ಟಿಯಲ್ಲಿ ಉತ್ತಮವಾದ ಬೆಳವಣಿಗೆಯೇ ಆಗಿದ್ದರೂ ಸದಸ್ಯರಿಗೆ ಪ್ರಾರಂಭಿಕ ಹಂತದಲ್ಲಿ ಇದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಈ ಸಾಫ್ಟ್‌ವೇರ್ ಅಳವಡಿಕೆಯ ನಂತರ ಅಂದಿನ ಲೆಕ್ಕಪತ್ರಗಳನ್ನು ಅಂದೇ ಸಂಪೂರ್ಣವಾಗಿ ಮುಗಿಸಬೇಕಾಗಿದ್ದು, ಸಾಲ ಮರುಪಾವತಿ ಅಥವಾ ಇನ್ನಾವುದೇ ತುರ್ತು ಸಂದರ್ಭಗಳಲ್ಲಿ ಸಹ ಹೊಂದಾಣಿಕೆ ಮಾಡಿಕೊಂಡು ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ. ಕಾರಣ ಸದಸ್ಯರು ಇದನ್ನು ಅರಿತು ಸಂಘದೊಂದಿಗೆ ಸಹಕಾರ ನೀಡಬೇಕು ಎಂದರು.

ಟಿಆರ್‌ಸಿ ಉಪಾಧ್ಯಕ್ಷ ವಿಶ್ವಾಸ ಬಲ್ಸೆ ಚವತ್ತಿ ಮಾತನಾಡಿ, ಕೊಳೆ ರೋಗದಿಂದ ರೈತರ ವಾರ್ಷಿಕ ಉತ್ಪನ್ನದಲ್ಲಿ ಅರ್ಧಕ್ಕಿಂತಲೂ ಕಡಿಮೆಯಾಗಿರುವುದಲ್ಲದೆ, ಅಡಕೆ ದರವೂ ಇಳಿಕೆಯಾಗಿದ್ದರಿಂದ ಮುಂಬರುವ ದಿನಗಳಲ್ಲಿ ಇದು ರೈತರ ಆರ್ಥಿಕ ಸ್ಥಿತಿಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

ಸಂಘದಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ಸೇವಾ ನಿವೃತ್ತಿ ಹೊಂದಿದ ವಿನೋದಾ ನರಸಿಂಹ ಹೆಗಡೆ, ಜುಮ್ಮನಕೊಪ್ಪ, ಫೋಟೋಗ್ರಫಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಾಗೇಂದ್ರ ಮುತ್ಮುರ್ಡು ಹಾಗೂ ಸಂಘದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ವ್ಯವಹರಿಸಿದ 11 ಸದಸ್ಯರನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ 10 ರೊಳಗಿನ ರ‌್ಯಾಂಕ್ ಪಡೆದ ಸಂಘದ ಸದಸ್ಯರ ಕುಟುಂಬ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಸಂಘದ ಮೂಲಕ ಮಹಸೂಲು ವಿಕ್ರಯಿಸಿದ ಸದಸ್ಯರಿಗೆ ಪ್ರೋತ್ಸಾಹಕವಾಗಿ ಸಮೃದ್ಧಿ ಬುಟ್ಟಿಯನ್ನು ಕೊಡಲು ತೀರ್ಮಾನಿಸಿದ್ದು, ವಾರ್ಷಿಕ ಸಭೆಯಲ್ಲಿ ಸಾಂಕೇತಿಕವಾಗಿ ಇಬ್ಬರು ಸದಸ್ಯರಿಗೆ ನೀಡುವ ಮೂಲಕ ಚಾಲನೆ ನೀಡಲಾಯಿತು. ನಿರ್ದೇಶಕರಾದ ಶಿವಾನಂದ ಭಟ್ ನಿಡಗೋಡ, ಆರ್.ವಿ. ಹೆಗಡೆ ಚಿಪಗಿ, ಸಂತೋಷ ಗೌಡ, ಜಿ.ಜಿ. ಹೆಗಡೆ ಕುರುವಣಿಗೆ, ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಶ್ರೀಪಾದ ಭಟ್ ಮಾವಿನಕೊಪ್ಪ, ಇತರರಿದ್ದರು.