ಪುತ್ತೂರು ಗ್ರಾಮಾಂತರ: ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಅಂದ್ರಿಗೇರಿ ಎಂಬಲ್ಲಿ ಸೋಮವಾರ ಬೃಹತ್ ಗಾತ್ರದ ಮರವೊಂದು ಉರುಳಿ ವಿದ್ಯುತ್ ಲೈನಿನ ಮೇಲೆ ಬಿದ್ದಿದೆ.
ಕಟಾರ ಅಂದ್ರಿಗೇರಿ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರ ಉರುಳಿ ರಸ್ತೆಗೆ ಅಡ್ಡವಾಗಿ, ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನಿನ ಮೇಲೆ ಬಿದ್ದಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯಾಗಿದೆ. ಈ ಘಟನೆಯಿಂದಾಗಿ ಕಟಾರ ಅಂದ್ರಿಗೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಧ್ಯಾಹ್ನ ವೇಳೆ ಮೆಸ್ಕಾಂ ಇಲಾಖೆಯ ಪವರ್‌ಮೆನ್‌ಗಳು ಸ್ಥಳಕ್ಕೆ ಭೇಟಿಯಿತ್ತು ವಿದ್ಯುತ್ ಲೈನಿನ ಮೇಲೆ ಬಿದ್ದಿದ್ದ ಮರದ ಕೊಂಬೆಗಳನ್ನು ಕ್ರೈನ್ ಮೂಲಕ ತೆರವುಗೊಳಿಸಿ ವಿದ್ಯುತ್ ತಂತಿಗಳ ಮರು ಜೋಡನಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಮರದ ಕೊಂಬೆಗಳ ತೆರವು ಕಾರ್ಯಕ್ಕೆ ಸ್ಥಳೀಯರು ನೆರವಾಗಿದ್ದಾರೆ.
ವಾರದ ಹಿಂದೆ ಇದೇ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.