ಜಿಲ್ಲೆ

ಮರಬಿದ್ದು ಅಡಕೆ ತೋಟಕ್ಕೆ ಹಾನಿ

ವಿನಯ ಹೆಗಡೆ

ಸಿದ್ದಾಪುರ: ತಾಲೂಕಿನಲ್ಲಿ ಮಳೆ-ಗಾಳಿಯ ಬಿರುಸು ಜೋರಾಗಿದ್ದರಿಂದ ಮೂರು ಮನೆಗೆ ಹಾನಿ ಸಂಭವಿಸಿದೆ ಹಾಗೂ ಎರಡು ಅಡಕೆ ತೋಟದ ಮೇಲೆ ಮರ ಬಿದ್ದು ನೂರಾರು ಅಡಕೆ ಮರಗಳು ನಾಶಗೊಂಡಿದೆ.

ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನದಿಂದ ಗುರುವಾರ ಬೆಳಗಿನವರೆಗೂ ಗಾಳಿ-ಮಳೆ ಜೋರಾಗಿದ್ದರಿಂದ ಹಾನಿ ಸಂಭವಿಸಿದೆ. ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ.

ಗೊದ್ಲಬೀಳ ಗ್ರಾಮದ ಸುಧಾ ಶ್ರೀಪಾದ ಹೆಗಡೆ ಹಾಗೂ ಸುತ್ತಲಮನೆ ಗ್ರಾಮದ ಗಾಳ್ಮಾವಿನ ಲಿಂಗ ಸಣ್ಣ ನಾಯ್ಕ ಅವರ ಅಡಕೆ ತೋಟದ ಮೇಲೆ ಭಾರೀ ಗಾತ್ರದ ಮರಗಳು ಬಿದ್ದು ನೂರೈವತ್ತಕ್ಕೂ ಹೆಚ್ಚು ಅಡಕೆ ಮರಗಳು ನಾಶಗೊಂಡಿವೆ.

ಸುತ್ತಲಮನೆ ಗ್ರಾಮದ ಗಾಳ್ಮಾವಿನ ಲಿಂಗ ಸಣ್ಣ ನಾಯ್ಕ ಅವರ ಅಡಕೆ ಕೊಂಡ್ಲಿಯ ಮಾಲಾ ಕೃಷ್ಣ ಅಂಬಾಡಿ ಎನ್ನುವವರ ವಾಸದ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿ ಉಂಟಾಗಿದೆ.

ಬೇಡ್ಕಣಿಯ ಪಾರ್ವತಿ ರಾಮಚಂದ್ರ ಚನ್ನಯ್ಯ ಅವರ ವಾಸ್ತವ್ಯದ ಮನೆಯ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ.ಕಲ್ಲೂರಿನ ಕಮಲಾಕರ ಕನ್ನ ನಾಯ್ಕ ಅವರ ಕೊಟ್ಟಿಗೆ ಮನೆ ಮುರಿದು ಬಿದ್ದು ಹಾನಿ ಸಂಭವಿಸಿದೆ.

ತಾಲೂಕಿನಲ್ಲಿ ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಗಿನವರೆಗೆ 105.4ಮಿ.ಮೀ ಮಳೆ ಬಿದ್ದಿದ್ದು ಇಲ್ಲಿಯವರೆಗೆ ತಾಲೂಕಿನಲ್ಲಿ 897ಮಿಮೀ ಮಳೆ ಬಿದ್ದು ದಾಖಲಾಗಿದೆ. ಗುರುವಾರವೂ ಗಾಳಿ-ಮಳೆ ಮುಂದುವರೆದಿದೆ.