ಶಿರಸಿ: ತಾಲೂಕಿನಲ್ಲಿ ಮಂಗಳವಾರ ಗಾಳಿ ಮಳೆ ತೀವ್ರಗೊಂಡಿದೆ. ಗ್ರಾಮೀಣ ಪ್ರದೇಶದ ವಿವಿಧೆಡೆ ಹಾನಿ ಸಂಭವಿಸಿದೆ.
ಇಲ್ಲಿಯ ಸುಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡನಗೇರಿಯಲ್ಲಿ ಕೃಷ್ಣ ತೇಜ ಮಡಿವಾಳ ಅವರ ವಾಸ್ತವ್ಯದ ಮನೆಯ ಮೇಲೆ ಬೃಹತ್ ಮರ ಮುರಿದುಬಿದ್ದು, ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಈ ವೇಳೆ ಅವರು ಮನೆಯಲ್ಲಿ ಇರದ ಕಾರಣ ಜೀವ ಹಾನಿ ಸಂಭವಿಸಿಲ್ಲ. ದೇವರಕೊಪ್ಪದಲ್ಲಿ ಶಾಲೆಯ ಶೌಚಗೃಹದ ಛಾವಣಿ ಗಾಳಿಯ ಅಬ್ಬರದಿಂದಾಗಿ ಹಾರಿ ಹೋಗಿದೆ. ಇಲ್ಲಿಯ ಅಡಕೆ ಜಡ್ಡಿಯಲ್ಲಿ ರಸ್ತೆ ಕುಸಿತವಾಗಿ ಗ್ರಾಮಸ್ಥರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ.
ಇಲ್ಲಿಯ ಮಾರಿಗದ್ದೆಗೆ ತೆರಳುವ ವಿದ್ಯುತ್ ಮಾರ್ಗದಲ್ಲಿ ತಾಂತ್ರಿಕ ತೊಂದರೆ ಮತ್ತು ವಿದ್ಯುತ್ ಪರಿವರ್ತಕ ಗಾಳಿ ಮಳೆಯಿಂದ ಹಾಳಾಗಿದೆ. ಇದರಿಂದಾಗಿ ಮಾರಿಗದ್ದೆ ಜಾಕ್ ವೆಲ್ನಿಂದ ನೀರು ಸರಬರಾಜಿಗೆ ತೊಂದರೆ ಉಂಟಾಗಿದ್ದು, ನಗರಕ್ಕೆ ಇನ್ನು ಎರಡು ದಿನಗಳ ಕಾಲ ನೀರು ಪೂರೈಕೆ ಸಾಧ್ಯವಾಗುವುದಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.