ಭಟ್ಕಳ: ತಾಲೂಕಿನಾದ್ಯಂತ ಬೆಳಗ್ಗೆಯಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಮಧ್ಯಮಧ್ಯ ಬಿಡುವು ನೀಡುತ್ತಿರುವುದರಿಂದ ನೆರೆಯ ಭೀತಿ ದೂರವಾಗಿದೆ. ಆದರೂ ಮಳೆಯ ಅವಾಂತರದಿಂದ ಹಲವೆಡೆ ಹಾನಿ ಸಂಭವಿಸಿದೆ.
ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ನಸ್ತರ್ ಎಂಬಲ್ಲಿ ಮಸೀದಿಯೊಂದರ ತಗಡಿನ ಶೆಡ್ ಹಾರಿ ಹೋಗಿ ಮಸೀದಿಯ ಮುಂಭಾಗಕ್ಕೆ ಬಿದ್ದಿದೆ. ಶಿರಾಲಿ 1 ಗ್ರಾಮದ ಪ್ರೇಮಾ ಮಂಜುನಾಥ ನಾಯ್ಕ ಅವರ ಮನೆಯ ಮೇಲೆ ಹಲಸಿನ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ.
ತಾಲೂಕಿನ ಬೆಂಗ್ರೆಯ ಪರಮೇಶ್ವರ ಚೌಡ ದೇವಾಡಿಗ ಅವರ ಆಟೋ ರಿಕ್ಷಾದ ಮೇಲೆ ತೆಂಗಿನ ಮರ ಬಿದ್ದು ಆಟೋ ರಿಕ್ಷಾ ಸಂಪೂರ್ಣವಾಗಿ ಹಾನಿಯಾಗಿದೆ. ಶನಿವಾರ ರಾತ್ರಿ ಸುರಿದ ಮಳೆಗೆ ಹಾಗೂ ಜೋರಾಗಿ ಬೀಸಿದ ಗಾಳಿಗೆ ಹೆಬಳೆ ಗ್ರಾಮದ ಬಬ್ಬನಕಲ ಮಜಿರೆಯ ಪರಮೇಶ್ವರ ನಾಯ್ಕ ಎಂಬುವರ ವಾಸ್ತವ್ಯದ ಮನೆ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.