ಜಿಲ್ಲೆ

ಕಿಂಡಿ ಅಣೆಕಟ್ಟು ಕೆಲಸ ಪುನರಾರಂಭ

Dakshina Kannada

ಕಡಬ: ಬಹುಗ್ರಾಮ ಕುಡಿಯುವ ನೀರಿನ ಯೊಜನೆ ಸಲುವಾಗಿ ಶಾಂತಿಮೊಗರು ಬಳಿ ಕುಮಾರಧಾರಾ ನದಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಪುನರಾರಂಭಗೊಂಡಿದೆ.

ಕಡಬ ತಾಲೂಕಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣ್ಚಪ್ಪಾಡಿ, ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯು 2021ರ ಮೇ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಶಾಸಕ ಎಸ್.ಅಂಗಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮುಖಾಂತರ ಯೋಜನೆಗೆ 7.5 ಕೋಟಿ ರೂ. ಅನುದಾನ ಒದಗಿಸಿದ್ದು, ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ನದಿ ಪಾತ್ರದ ಎರಡು ಭಾಗದ ಮೂರು ಕಿ.ಮೀ. ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ.

ನದಿ ತಳಮಟ್ಟದಿಂದ 4 ಮೀ. ಎತ್ತರಕ್ಕೆ ನಿರ್ಮಾಣವಾಗುವ ಈ ಅಣೆಕಟ್ಟು 221 ಮೀಟರ್ ಉದ್ದ ಹಾಗೂ ಮೂರು ಮೀಟರ್ ಅಗಲವಿರಲಿದೆ. 56 ಕಿಂಡಿಗಳನ್ನು ಒಳಗೊಂಡಿದೆ. ಇದರಲ್ಲಿ 18.56 ಎಂಸಿಎಫ್‌ಟಿ ನೀರು ಶೇಖರಣೆಯಾಗಲಿದೆ. ಡಿಸೆಂಬರ್ ಆರಂಭದಿಂದ ನದಿಯ ನೀರಿನ ಮಟ್ಟ ಗಮನಿಸಿ ಹಲಗೆಗಳನ್ನು ಜೋಡಣೆ ಮಾಡಲಾಗುತ್ತದೆ. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ವೇಳೆ ಹಲಗೆಗಳನ್ನು ತೆಗೆದು ನೀರು ಹೊರಬಿಡಲಾಗುತ್ತದೆ.

ಎರಡು ವರ್ಷ ಹಿಂದೆ ಆರಂಭ: ಎರಡು ವರ್ಷ ಹಿಂದೆ ಕಾಮಗಾರಿ ಆರಂಭಗೊಂಡು ತಳಪಾಯದ ಕೆಲಸ ನಡೆದಿತ್ತು. 2020ರೊಳಗೆ ಕಾಮಗಾರಿ ಮುಗಿಸಲು ಅವಧಿ ನಿಗದಿಯಾಗಿತ್ತು. ಆದರೆ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆ ಆಗದ ಕಾರಣ ಕಾಮಗಾರಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಸಾಗಿರಲಿಲ್ಲ. ಈಗ ಮತ್ತೆ ಕಾಮಗಾರಿ ಪ್ರಾರಂಭಗೊಂಡಿದ್ದು, ಒಂದು ಭಾಗದಲ್ಲಿ ಪಿಲ್ಲರ್ ಅಳವಡಿಕೆಗೆ ಪೂರಕವಾಗಿ ಯಂತ್ರಗಳಿಂದ ಅಗೆತ, ನೀರಿನ ಹರಿವು ತಡೆಗಟ್ಟಲು ಮಣ್ಣಿನ ಕಟ್ಟ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಬಹು ಬೇಡಿಕೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಂಬರುವ ಬೇಸಿಗೆಯೊಳಗೆ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ. ಯೋಜನೆಯಿಂದ 4 ಗ್ರಾಮಗಳ ಕುಡಿಯುವ ನೀರಿನ ಬವಣೆ ನೀಗಲಿದೆ. ನದಿಯ ಇಕ್ಕಡೆಗಳಲ್ಲಿ ನೀರಿನ ಒರತೆ ಹೆಚ್ಚಲಿದೆ.

- ಎಸ್.ಅಂಗಾರ, ಶಾಸಕ