ವಿಜಯವಾಣಿ ಸುದ್ದಿಜಾಲ ಕಡಬ
ಕುಮಾರಧಾರಾ ನದಿಗೆ ಕಡಬ ತಾಲೂಕಿನ ಶಾಂತಿಮೊಗರು ಎಂಬಲ್ಲಿ ನಿರ್ಮಿಸಲಾದ ಬೃಹತ್ ಕಿಂಡಿ ಅಣೆಕಟ್ಟು ನಿರ್ಮಾಣದ ಕಾಮಗಾರಿ ಪೂರ್ಣಗೊಂಡು ಮೂರು ವರ್ಷವಾಗುತ್ತಾ ಬಂದರೂ ಈವರೆಗೆ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಯೋಜನವಾಗಿಲ್ಲ. ಕಿಂಡಿ ಅಣೆಕಟ್ಟುವಿಗೆ ಸೂಕ್ತ ಸಮಯದಲ್ಲಿ ಹಲಗೆ ಜೋಡಿಸದಿರವುದು ಹಾಗೂ ನಿರ್ವಹಣೆ ವೈಫಲ್ಯದಿಂದ ನೀರು ಸಂಗ್ರಹವಾಗದೆ ರೈತರಿಗೆ ಸಮರ್ಪಕವಾಗಿ ನೀರು ಬಳಕೆಗೆ ಅವಕಾಶವೇ ಸಿಕ್ಕಿಲ್ಲ.
ಕೃಷಿ ಉದ್ದೇಶಕ್ಕೆಂದು ನಿರ್ಮಾಣ ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳುವ ನಿರ್ಧಾರದಿಂದ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಹಲಗೆ ಜೋಡಿಸುವ ಕಾರ್ಯ ಈವರೆಗೆ ಸಮರ್ಪಕವಾಗಿ ನಡೆಯದೆ ರೈತರ ಪ್ರಯೋಜನಕ್ಕೆ ಬಂದಿರಲಿಲ್ಲ. ಈ ಭಾರಿ ಇನ್ನೂ ಅಳವಡಿಕೆಗೆ ಸಂಬಂಧಪಟ್ಟವರು ಮುಂದಾಗಿಲ್ಲ. ಹಾಗಾಗಿ ಈ ವರ್ಷವಾದರೂ ರೈತರ ಉಪಯೋಗಕ್ಕೆ ದಕ್ಕುತ್ತಾ ಎನ್ನುವ ಪ್ರಶ್ನೆ ರೈತರಲ್ಲಿ ಮೂಡಿದೆ.
ಆರಂಭದ ವರ್ಷದಲ್ಲಿ ಬೇಸಿಗೆಯಲ್ಲಿ ಕೊನೆಯಲ್ಲಿ ಅಳವಡಿಸಲಾಗಿತ್ತು. ಅದಾಗಲೇ ಮಳೆ ಪ್ರಾರಂಭವಾಗಿತ್ತು, ಬಳಿಕ ಕಳೆದ ವರ್ಷ ಹಲಗೆ ಅಳವಡಿಸಿದ್ದರೂ ಯಾರೋ ಕಿಡಿಗೇಡಿಗಳು ಕಿಂಡಿ ಅಣೆಕಟ್ಟಗೆ ಅಳವಡಿಸಲಾಗಿದ್ದ ಹಲಗೆ ಕಿತ್ತು ಎಸೆದು ನೀರು ಪೋಲಾಗುವಂತೆ ಮಾಡಿದ್ದರು. ಇದರ ಬೆನ್ನಿಗೆ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಷ್ಟೊತ್ತಿಗಾಲೇ ನೀರು ಬರಿದಾಗಿರುವುದರಿಂದ ಮತ್ತೆ ಹಲಗೆಗಳನ್ನು ಸಮರ್ಪಕವಾಗಿ ಅಳವಡಿಸಲು ಸಾಧ್ಯವಾಗಿಲ್ಲ.
7.5 ಕೋಟಿ ರೂ.ನಲ್ಲಿ ಅನುಷ್ಠಾನ: ಕಿಂಡಿ ಅಣೆಕಟ್ಟು ಅನುಷ್ಠಾನವಾಗಿರುವುದರಿಂದ ಉದ್ದೇಶಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಭರಪೂರ ನೀರಿನ ಮೂಲ ಇಲ್ಲಿದೆ. ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮುಖಾಂತರ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಮಾಜಿ ಸಚಿವ ಎಸ್.ಅಂಗಾರ ಶಿಪಾರಸ್ಸಿನಂತೆ 7.5 ಕೋಟಿ ರೂ.ನಲ್ಲಿ ಶಾಂತಿಮೊಗೇರುವಿನಲ್ಲಿ ಈ ಕಿಂಡಿ ಅಣೆಕಟ್ಟು ಯೋಜನೆಗೆ ಅನುಷ್ಠಾನವಾಗಿದೆ.
ಐವತ್ತಾರು ಕಿಂಡಿ ನಿರ್ಮಾಣ: ನದಿ ತಳಮಟ್ಟದಿಂದ ನಾಲ್ಕು ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿರುವ ಈ ಅಣೆಕಟ್ಟು 221.4 ಮೀಟರ್ ಉದ್ದ ಹಾಗೂ 3.75 ಮೀಟರ್ ಅಗಲವಿದೆ. ಐವತ್ತಾರು ಕಿಂಡಿಗಳನ್ನು ನಿರ್ಮಾಣ ಮಾಡಲಾಗಿದೆ. 56 ಪಿಲ್ಲರ್‌ಗಳಲ್ಲಿ ಸ್ಲಾೃಬ್ ಜೋಡನೆ ಮಾಡಲಾಗಿದೆ. ಹಲಗೆ ಜೋಡಿಸಿದರೆ 18.56 ಎಂಸಿಎಫ್‌ಟಿ ನೀರು ಶೇಖರಣೆಯಾಗುತ್ತದೆ. ಡಿಸೆಂಬರ್ ಆರಂಭದಿಂದ ನದಿ ನೀರಿನಮಟ್ಟ ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡುಬೇಕು. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆದು ಮಳೆಗಾಲದಲ್ಲಿ ನೀರು ಯಾವುದೇ ಅಡೆತಡೆಯಿಲ್ಲದೆ ಹರಿಯಬಿಡಬೇಕು ಇದು ನಿಯಮ. ಹಲಗೆ ಜೋಡಿಸಿದರೆ ನದಿಯ ಇಕ್ಕೆಲೆಗಳಲ್ಲಿ ಎರಡರಿಂದ ಮೂರು ಕಿಲೋ ಮೀಟರ್ ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಕೃಷಿಕರ ಕೊಳವೆಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬುತ್ತದೆ.
ಈ ಅಣೆಕಟ್ಟೆ ಕುಡಿಯುವ ನೀರಿಗಾಗಿ ಬಳಕೆ ಮಾಡುವ ಉದ್ದೇಶವಿರುವುದರಿಂದ ಈಗಾಗಲೇ ಜಲಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಇಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ನೀರೆತ್ತಿ ಸವಣೂರಿನ ಮಾಂತೂರಿನಲ್ಲಿ ನೀರು ಶುದ್ಧೀಕರಣಗೊಂಡು ಶಾಂತಿಮೊಗರಿನ ಆಸುಪಾಸಿನ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಜಾಕ್‌ವೆಲ್ ನಿರ್ಮಾಣ ಜಾಗದಲ್ಲಿ ಕಲ್ಲು ಹಾಸುಪಾದೆ ಸಿಕ್ಕಿರುವುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ ಶೀಘ್ರ ಕಾಮಗಾರಿ ಮುಗಿಸಿ ಹಲಗೆ ಜೋಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. - ಸಂಗಪ್ಪ ಹುಕ್ಕೇರಿ, ಅಭಿಯಂತ ಜಿಪಂ ಉಪ ವಿಭಾಗ, ಕಡಬ
ಸಂಬಂಧಪಟ್ಟವರು ಗಮನಹರಿಸಿ
ಕಿಂಡಿ ಅಣೆಕಟ್ಟು ನಿರ್ಮಾಣವಾದಾಗಿನಿಂದ ಸೂಕ್ತ ಸಮಯದಲ್ಲಿ ಹಲಗೆ ಜೋಡಣೆ, ನಿರ್ವಹಣೆ ಮಾಡುವಲ್ಲಿ ಸಂಬಂಧಪಟ್ಟವರು ವಿಫಲವಾಗಿರುವುದರಿಂದ ಕಿಂಡಿ ಅಣೆಕಟ್ಟುವಿನ ಸಮರ್ಪಕ ಬಳಕೆಯಾಗಿಲ್ಲ, ಈ ಬಾರಿ ಜನವರಿ ತಿಂಗಳು ಆರಂಭವಾದರೂ ಇನ್ನೂ ಹಲಗೆ ಜೋಡಣೆ ಮಾಡಿಲ್ಲ, ಸಂಬಂಧಪಟ್ಟವರು ತಕ್ಷಣ ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ರೈತಪರ ಹೋರಾಟಗಾರ ಜನಾರ್ದನ ಗೌಡ ಕಯ್ಯಪೆ ತಿಳಿಸಿದ್ದಾರೆ.