???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಯರಂಬಾಡಿಯ ಮಿನ್ನತ್ತುಹಳ್ಳ ಡ್ಯಾಂ ಸೋರಿಕೆ

ಎ. ಆರ್. ರಘುರಾಮ

 ಹನೂರು : ಕ್ಷೇತ್ರದ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯದ್ದೇ ಈಗ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಉತ್ತಮ ಬೆಳೆ ಬೆಳೆಯಲು ಭೂಮಿ ತಾಯಿ ಮಕ್ಕಳು ಇನ್ನಿಲ್ಲದ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಹೂಗ್ಯಂ ಸಮೀಪದ ಯರಂಬಾಡಿಯ ಮಿನ್ನತ್ತುಹಳ್ಳ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಸೋರಿಕೆಯಾಗುತ್ತಿದೆ. ಹಳ್ಳದ ಮೂಲಕ ಪೋಲಾಗುತ್ತಿದ್ದು, ಈ ಬಗ್ಗೆ ತುರ್ತು ಕ್ರಮ ವಹಿಸುವುದು ಅಗತ್ಯವಾಗಿದೆ.

ಹೂಗ್ಯಂ ಗ್ರಾಮ ತಮಿಳುನಾಡು ಹಾಗೂ ಕರ್ನಾಟಕದ ಗಡಿ ಭಾಗದಲ್ಲಿದೆ. ಇಲ್ಲಿನ ರೈತರಿಗೆ ಮಿನ್ನತ್ತುಹಳ್ಳ ಜಲಾಶಯ ಜೀವನಾಡಿಯಾಗಿದೆ. ಈ ಜಲಾಶಯವನ್ನು 1983ರಲ್ಲಿ ನಿರ್ಮಿಸಲಾಗಿದೆ. ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ಜಲಾಶಯವನ್ನು ಸೇವೆಗೆ ಸಮರ್ಪಣೆ ಮಾಡಿದ್ದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಇದು ಒಳಪಟ್ಟಿದೆ.

ತಮಿಳುನಾಡಿನ ಗುಂಡಾರೆ, ಮಾಸನಪಾಳ್ಯ ಹಾಗೂ ತಾಲೂಕಿನ ಮಿಣ್ಯಂ, ಪಿ.ಜಿ ಪಾಳ್ಯ, ಬೈಲೂರು ಭಾಗದಲ್ಲಿ ಉತ್ತಮ ಮಳೆಯಾದರೆ ಈ ಜಲಾಶಯವು ಭರ್ತಿಯಾಗುತ್ತದೆ. ಇದರಿಂದ ಈ ಭಾಗದ ಪೆದ್ದನಪಾಳ್ಯ, ಕೂಡಲೂರು, ನೆಲ್ಲೂರು, ಅಂಚಿಪಾಳ್ಯ, ಜಲ್ಲಿಪಾಳ್ಯ ಹಾಗೂ ಹೂಗ್ಯಂ ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ದೊರಕುತ್ತದೆ. ಈ ಭಾಗದ ಮುಖ್ಯ ಜಲ ಮೂಲದಲ್ಲೇ ಜಲ ಸೋರಿಕೆಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಈ ಡ್ಯಾಂ ನಿಂದ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿನ ವನ್ಯಜೀವಿಗಳಿಗೆ ನೀರಿನ ಆಸರೆ ದೊರಕುತ್ತಿದೆ. ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಕಾರಣವಾಗಿದೆ.

ಮಳೆ ಬಿದ್ದರೆ ಮಾತ್ರ ಭರ್ತಿ:

ಈ ಜಲಾಶಯವು ಉತ್ತಮ ಮಳೆಯಾದರಷ್ಟೇ ಭರ್ತಿಯಾಗುತ್ತದೆ. ಹಾಗಾಗಿ 2 ವರ್ಷದ ಹಿಂದೆ ಸಮರ್ಪಕ ಮಳೆಯಿಲ್ಲದ ಪರಿಣಾಮ ನೀರಿನ ಪ್ರಮಾಣ ತೀವ್ರ ಕ್ಷೀಣವಾಗಿತ್ತು. ಇದರಿಂದ ಈ ಭಾಗದ ರೈತರು ತೊಂದರೆಯನ್ನು ಅನುಭವಿಸಿದ್ದರು. ಈ ವರ್ಷ ಉತ್ತಮ ಮಳೆಯಾದರಿಂದ ಜಲಾಶಯವು ಭರ್ತಿಯಾಗಿದ್ದು, ಕಳೆದ ತಿಂಗಳು ಶಾಸಕ ಎಂ.ಆರ್ ಮಂಜುನಾಥ್ ಬಾಗಿನ ಅರ್ಪಿಸಿದ್ದರು. ಕಾಲುವೆಗಳ ಮೂಲಕ ಜಮೀನುಗಳಿಗೆ ಈ ವರ್ಷ ನೀರು ಹರಿಸುತ್ತಿರುವುದು ರೈತರ ಪಾಲಿಗೆ ವರದಾನವಾಗಿದೆ. ಹಾಗಾಗಿ ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರು ಪೋಲಾಗದಂತೆ ಸಂರಕ್ಷಿಸುವುದು ಅತ್ಯಗತ್ಯ. ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ಫಸಲು ಪಡೆಯಲು ಅನುಕೂಲವಾಗಲಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ನೀರು ಡ್ಯಾಂನಿಂದ ಸೋರಿಕೆಯಾಗುತ್ತಿದೆ. ಹಳ್ಳದ ಮೂಲಕ ಹರಿದು ವ್ಯರ್ಥವಾಗುತ್ತಿರುವ ಬಗ್ಗೆ ರೈತರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.