ಮಂಡ್ಯ: ಜಾತಿ ನಿಂದನೆ, ಕೊಲೆ ಬೆದರಿಕೆ ಹಾಗೂ ಮಹಿಳೆಯರನ್ನು ನಿಂದನೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನನಾಯ್ಡು ಶಾಸಕತ್ವವನ್ನು ರದ್ದು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಪ್ರತಿಭಟಿಸಿದರು.
ಸರ್‌ಎಂವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ವಿಧಾನಸಭಾಧ್ಯಕ್ಷರಿಗೆ ಮನವಿ ಪತ್ರ ರವಾನಿಸಿದರು. ಗುತ್ತಿಗೆದಾರ ಚೆಲುವರಾಜು ಜತೆ ನಡೆಸಿದ ಫೋನ್ ಸಂಭಾಷಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಜಾತಿ ಹೆಸರಿನಲ್ಲಿ ನಿಂದನೆ ಮಾಡಿದ್ದಾರೆ. ಮಾತ್ರವಲ್ಲದೆ ಬೆದರಿಕೆಯೊಡ್ಡಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಪದ ಬಳಸಿ ನಿಂದನೆ ಮಾಡಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಇವರು ಸರ್ವ ಜನಾಂಗವನ್ನು ಸಮಾನತೆಯಿಂದ ಕಂಡು ಜನರ ಸೇವೆ ಮಾಡಬೇಕಾಗಿತ್ತು. ಆದರೆ ಸಂವಿಧಾನದ ಅನುಚ್ಛೇದ 14, 15, 16, 17 ಅನ್ನು ಗೌರವಿಸದೆ ಜಾತಿ ನಿಂದನೆ ಮಾಡಿ ಅಸ್ಪೃಶ್ಯತೆ ಆಚರಿಸುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅನಾಗರಿಕವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸಂವಿಧಾನ ವಿರೋಧಿ ನಡೆ ತೋರಿರುವ ಮುನಿರತ್ನ ನಾಯ್ಡು ಶಾಸಕತ್ವವನ್ನು ರದ್ದು ಮಾಡುವ ಮೂಲಕ ದೇಶದ ಕಾನೂನಿನಲ್ಲಿ ಸರ್ವರೂ ಸಮಾನರು ಎಂಬ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ್, ಜಿಲ್ಲಾಧ್ಯಕ್ಷ ಚನ್ನಕೇಶವ, ಎಚ್.ಎನ್.ಬಲರಾಮ, ಸೋಮಶೇಖರ್ ಮೇನಾಗರ, ಆರ್ಮುಗಂ ಬೆಳಗೊಳ, ಕುಮಾರ್, ರಮೇಶ್, ನಾಗರಾಜು ಮರಳೆಗಾಲ, ರವಿ ನರಹಳ್ಳಿ ಇತರರಿದ್ದರು.