ವಿಧವೆ ನಾಗರತ್ನಮ್ಮ ಸಾಗುವಳಿ ಭೂಮಿ ಉಳಿವಿಗಾಗಿ ದಲಿತ ಸಂಟನೆಗಳಿಂದ ಜಮೀನಿನಲ್ಲಿ ಧರಣಿ
ಮಾಗಡಿ: ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶಿಷ್ಟ ಜಾತಿಯ ವಿಧವೆ ನಾಗರತ್ನಮ್ಮ ಅವರಿಗೆ ನ್ಯಾಯ ದೊರಕಿಸಿಕೊಡದಿದ್ದರೆ ವಿವಿಧ ದಲಿತ ಸಂಟನೆಗಳ ನೇತೃತ್ವದಲ್ಲಿ ಅವರ ಕುಟುಂಬಸ್ಥರೊಂದಿಗೆ ಕುದೂರು ಪೊಲೀಸ್ ಠಾಣೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಾಮ್ರಾಜ್ಯ ಸೇನೆಯ ರಾಜ್ಯಾಧ್ಯಕ್ಷ ಗುಡೇಮಾರನಹಳ್ಳಿ ನಾಗರಾಜು ಎಚ್ಚರಿಕೆ ನೀಡಿದರು.
ತಾಲೂಕಿನ ಸೋಲೂರು ಹೋಬಳಿ ಕೋರಮಂಗಲ ಸರ್ವೇ ನಂ.17ರ ಜಮೀನಿನಲ್ಲಿ ಬಳಿ ನಾಗರತ್ನಮ್ಮ ಮತ್ತು ಕುಟುಂಬಸ್ಥರು ಹಾಗೂ ವಿವಿಧ ದಲಿತ ಸಂಟನೆಗಳ ನೇತೃತ್ವದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಸಹಿತ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು.
ನಾಗರತ್ನಮ್ಮ ಕಳೆದ 15 ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಕಿಡಿಗೇಡಿಗಳಿಬ್ಬರು ನಾಗರತ್ನಮ್ಮ ಬಿತ್ತಿದ ಹೊಲವನ್ನು ದೌರ್ಜನ್ಯದಿಂದ ಉಳುಮೆ ಮಾಡಿ ಮತ್ತೊಮ್ಮೆ ಬಿತ್ತನೆ ಮಾಡಿದ್ದಾರೆ. ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದರಿಂದ ನಾಗರತ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿ ಹಾಸಿಗೆ ಹಿಡಿದಿದ್ದಾರೆ. ಆದರೂ ನ್ಯಾಯಕ್ಕಾಗಿ ನಾಗರತ್ನಮ್ಮ ತನ್ನ ತಂದೆ ಮುನಿನಂಜಯ್ಯ ಅವರೊಂದಿಗೆ ಜಮೀನಿನ ಬಳಿ ಕಳೆದ 5 ದಿನಗಳಿಂದ ಚಳಿ, ಮಳೆ ಗಾಳಿಯನ್ನದೆ ಟೆಂಟ್ ಹಾಕಿಕೊಂಡು ಕುಳಿತಿದ್ದಾರೆ. ಕೂಡಲೇ ತಹಸೀಲ್ದಾರ್ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಸತ್ಯಾಸತ್ಯತೆಯನ್ನು ಅರಿತು ನಾಗರತ್ನಮ್ಮ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಅವರು ಆಗ್ರಹಿಸಿದರು.
ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ, ಆರೋಪಿಗಳ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡು ನ್ಯಾಯ ಒದಗಿಸಿಲ್ಲ. ಕನಿಷ್ಠ ಪಕ್ಷ ಠಾಣೆಗೆ ಕರೆಸಿ ಬುದ್ಧಿಮಾತನ್ನೂ ಹೇಳಿಲ್ಲ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಇನ್ಸ್ಪೆಪೆಕ್ಟರ್ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರೆವಿನ್ಯೂ ಅಧಿಕಾರಿಗಳು ನಾಗರತ್ನಮ್ಮಬಳಿ ಇರುವ ದಾಖಲೆಗಳನ್ನು ಪರಿಶೀಲನೆ ನಡೆಸಿ ತಹಶೀಲ್ದಾರ್ ಅವರಿಗೆ ಸೂಕ್ತ ವರದಿ ನೀಡಬೇಕು ಎಂದು ಆಗ್ರಹಿಸಿದರು.
ಕೋರಮಂಗಲದ ಗಂಗಯಲ್ಲಪ್ಪ ಮಾತನಾಡಿ, ನಾಗರತ್ನಮ್ಮ ಮತ್ತು ಮುನಿ ನಂಜಪ್ಪ ಅವರಿಗೆ ನ್ಯಾಯ ಒದಗಿಸದೆ ಇದ್ದಲ್ಲಿ ನಾಗರತ್ನಮ್ಮ ಕುಟುಂಬಸ್ಥರು ಹಾಗೂ ವಿವಿಧ ದಲಿತ ಸಂಟನೆಗಳು ಒಟ್ಟಾಗಿ ರಾಜಭವನದವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಮನವಿ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸುಗ್ಗನಹಳ್ಳಿ ವಿಜಯಕುಮಾರ್, ಧೃತಿಭಟ್, ಹರ್ಷಿತಾಶ್ರೀ, ಗೀತಾಶ್ರೀ, ನಾರಾಯಣ, ರವಿಕುಮಾರ್, ರಾಜೇಂದ್ರ, ಕಂಬದ ನರಸಯ್ಯ, ಗುರುಮೂರ್ತಿ, ಮಂಜುಳಾ, ಸವಿತಾ, ವಾಣಿ ಇತರರು ಇದ್ದರು.