ಜಿಲ್ಲೆ

ಗ್ಯಾರಂಟಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ನೀಡಿರುವುದಕ್ಕೆದಲಿತ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ

ಮೈಸೂರು: ದಲಿತರಿಗೆ ಮೀಸಲಿಟ್ಟಿರುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣದಲ್ಲಿ ಸುಮಾರು 25,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾಲಯ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಮಾನಸಗಂಗೋತ್ರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಒಕ್ಕ್ಕೂಟದ ಅಧ್ಯಕ್ಷ ಸಚಿನ್ ಮಾತನಾಡಿ, ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದಲ್ಲದೆ, ಸಮಾಜ ಕಲ್ಯಾಣ ಇಲಾಖೆಯಿಂದ ಶೇ.60 ಕ್ಕಿಂತ ಹೆಚ್ಚಿನ ಅಂಕ ಪಡೆದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಪ್ರಸಕ್ತ ಸಾಲಿನಿಂದ ಶೇ.75 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವಂತೆ ಆದೇಶ ಹೊರಡಿಸಿದೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ದೂರಿದರು.
ಸರ್ಕಾರ ಎಲ್ಲ ಕಾಲೇಜುಗಳ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಂಗಡ ಶುಲ್ಕ ಕಟ್ಟದೆಯೇ ಪ್ರವೇಶ ಪಡೆಯಬಹುದು ಎಂಬ ಆದೇಶ ಹೊರಡಿಸಿದೆ. ಆದರೂ ಹಲವು ಕಾಲೇಜುಗಳಲ್ಲಿ ಈ ಆದೇಶ ಜಾರಿಯಲ್ಲಿ ಇಲ್ಲ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ದಲಿತ ವಿರೋಧಿ ನೀತಿಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ನವೀನ್ ಕೋಳೂರು, ಗಿರೀಶ್ ಬೆಂಡರವಾಡಿ, ಮುತ್ತುರಾಜ್, ರೋಹಿತ್ ಇತರರು ಇದ್ದರು.