ವಿಜಯಪುರ: ಒಳಮೀಸಲಾತಿ ಜಾರಿಗೊಳಿಸಿ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವ ನೂರಾರು ವಿದ್ಯಾರ್ಥಿಗಳು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿ ಬಹಿರಂಗ ಸಮಾವೇಶವಾಗಿ ಮಾರ್ಪಟ್ಟಿತು. ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ಘೋಷಣೆ ಕೂಗಿದರು.
ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ಒಳಮೀಸಲಾತಿ ಜಾರಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಕಾಲಹರಣ ಮಾಡುತ್ತಿದೆ. ಇದರಿಂದ ನೇಮಕಾತಿಗಳಾಗುತ್ತಿಲ್ಲ. ಲಕ್ಷಾಂತರ ವಿದ್ಯಾರ್ಥಿ, ನಿರುದ್ಯೋಗಿಗಳು ಆತಂಕದಲ್ಲಿದ್ದಾರೆ. ಮೂರು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಹೋರಾಟಗಾರರ ತಾಳ್ಮೆಯ ಕಟ್ಟೆ ಒಡೆದಿದೆ. ಇದರ ಜೊತೆಗೆ ಉದ್ಯೋಗ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿ, ನಿರುದ್ಯೋಗಿ ಯುವಜನರ ವಯಸ್ಸು ಮೀರುತ್ತಿದೆ, ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂದರು.
ರಾಜ್ಯ ಸರ್ಕಾರ ಮೂರು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಹೋರಾಟಗಾರ ತ್ಯಾಗ ಮತ್ತು ಬಲಿದಾನ ಜೊತೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸುವ ಮೂಲಕ ಶೀಘ್ರವೇ ಒಳಮೀಸಲಾತಿ ಜಾರಿಮಾಡಿ, ಹೊಸ ನೇಮಕಾತಿ ಅಧಿಸೂಚನೆ ಹೊರಡಿಸುವ ಮೂಲಕ ನಾಡಿನ ಎಲ್ಲಾ ವರ್ಗದ ವಿದ್ಯಾರ್ಥಿ ಯುವಜನರಿಗೆ ಉದ್ಯೋಗ ನೀಡಬೇಕು ಎಂದರು.
ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಮಾತನಾಡಿ, ದಲಿತ ವಿದ್ಯಾರ್ಥಿ ಪರಿಷತ್ ಈಗಾಗಲೇ ಹಲವು ಬಾರಿ ಒಳಮೀಸಲಾತಿಗಾಗಿ ಆಗ್ರಹಿಸಿ ಹೋರಾಡಿ ಸರ್ಕಾರಕ್ಕೆ ಆಗ್ರಹಿಸುತ್ತ ಬಂದಿದೆ. ಈಗ ಹೋರಾಟಗಾರರ ತಾಳ್ಮೆ ಕಟ್ಟೆ ಒಡೆದಿದೆ. ಸರ್ಕಾರ ಮತ್ತೆ ತಾಳ್ಮೆ ಪರೀಕ್ಷೆ ಮಾಡುವ ದುಸ್ಸಾಹಸಕ್ಕೆ ಮುಂದಾಗಬಾರದು. ಪರಿಶಿಷ್ಟ ಜಾತಿಗಳ ಸಮೀಕ್ಷಾ ಅವಧಿಯನ್ನು ಪದೇಪದೇ ವಿಸ್ತರಣೆ ಮಾಡಬಾರದು. ಆದಷ್ಟು ಬೇಗ ಸರ್ಕಾರ ವರದಿ ಸ್ವೀಕರಿಸಬೇಕು. ವಿಶೇಷ ಅಧಿವೇಶನ ಕರೆದು ಜುಲೈ 10ರೊಳಗೆ ಒಳ ಮೀಸಲಾತಿ ಅನುಷ್ಠಾನ ಮಾಡಬೇಕು ಎಂದರು.
ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಮಾತನಾಡಿ, ಈಗಾಗಲೇ ರಾಜ್ಯದಾದ್ಯಂತ ಶೇ 90ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗಣತಿ ನಡೆದಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇ. 50ರಷ್ಟು ಮಾತ್ರ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಸಮೀಕ್ಷೆಯನ್ನು ಇದೇ ತಿಂಗಳ ಮುಗಿಸಬೇಕು. ಮತ್ತೆ ಅವಧಿ ವಿಸ್ತರಣೆ ಮಾಡಿದರೆ ಒಳಮೀಸಲಾತಿ ಅನುಷ್ಟಾನಕ್ಕೆ ತಡವಾಗಲಿದೆ. ಒಳಮೀಸಲಾತಿ ಜಾರಿಗೆ ಸರ್ಕಾರ ಮತ್ತೆ ವಿಳಂಬ ನೀತಿ ಅನುಸರಿಸದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಮಹಾದೇವ ಚಲವಾದಿ, ದಾವೂದ್ ನಾಯ್ಕೋಡಿ, ಯಾಸೀನ ಇನಾಮದಾರ, ಪ್ರಶಾಂತ ದಾಂಡೇಕರ್, ಯಮನಪ್ಪ ಮಾದರ ಮತ್ತಿತರರಿದ್ದರು.