ಜಿಲ್ಲೆ

ಕಾಲನಿಗೆ ಕಲ್ಪಿಸಿ ಮೂಲಭೂತ ಸೌಕರ್ಯ

Davangere - Desk - Shobha Krishna Gowda

ಜಗಳೂರು: ತಾಲೂಕಿನ ಲಕ್ಕಂಪುರ ಹೊಸೂರು ಗ್ರಾಮದ ಎಸ್ಸಿ ಕಾಲನಿಗೆ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಸೋಮವಾರ ದಲಿತ ಸಂಘರ್ಷ ಸಮಿತಿ(ದಸಂಸ) ನೇತೃತ್ವದಲ್ಲಿ ನಿವಾಸಿಗಳು ಹೊಸಕೆರೆ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.

ಲಕ್ಕಂಪುರದಿಂದ ಪಂಚಾಯಿತಿಗೆ ಆಗಮಿಸಿದ ಗ್ರಾಮಸ್ಥರು ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ತಾಲೂಕಾಧ್ಯಕ್ಷ ಬಿ. ಸತೀಶ್ ಮಲೆಮಾಚಿಕೆರೆ ಮಾತನಾಡಿ, ದಲಿತರು ವಾಸಿಸುವ ಕಾಲನಿಯಲ್ಲಿ ಚರಂಡಿ, ಬೀದಿದೀಪ, ರಸ್ತೆ ಸೇರಿ ಬದುಕಲು ಬೇಕಾದ ಕನಿಷ್ಠ ಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ತ್ಯಾಜ್ಯ ನೀರು ನಿಂತು ದುರ್ವಾಸನೆ ಬೀರುತ್ತಿ್ತೆ. ಇನ್ನು ಕೆಲವರು ಮನೆ ಮುಂದೆ ಚರಂಡಿ ನೀರು ಹರಿಯದಂತೆ ಅಡ್ಡಲಾಗಿ ಮಣ್ಣು ಹಾಕಿದ್ದು ಅಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಜನರು ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದಾರೆ ಎಂದು ದೂರಿದರು.

ಇಲ್ಲಿನ ಅವ್ಯವಸ್ಥೆ ಬಗ್ಗೆ ಗ್ರಾಪಂ ಪಿಡಿಒ ಅವರ ಗಮನಕ್ಕೆ ತಂದಿದ್ದರೂ ಸಮಸ್ಯೆ ಆಲಿಸಲಿಲ್ಲ. ಬೇಡಿಕೆಗಳಿಗೆ ಕಿವಿಗೊಡದೇ ಉಡಾಫೆಯಾಗಿ ಉತ್ತರ ನೀಡುತ್ತಿದ್ದಾರೆ. ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ವಾರದಿಂದ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ದಸಂಸ ಸಂಘಟನಾ ಸಂಚಾಲಕ ಹನುಮಂತಪ್ಪ ಕ್ಯಾಸೇನಹಳ್ಳಿ, ಭರಮಣ್ಣ ನಾಯಕ, ರಮೇಶ್, ರೇಣುಕ ಪ್ರಸಾದ್, ಹನುಮಂತಪ್ಪ, ರಮೇಶ್, ರಾಮಣ್ಣ, ಪಾಲಮ್ಮ, ಶಾರದಮ್ಮ, ಕರಿಯಮ್ಮ, ಅಂಜಿನಮ್ಮ, ರೇಣುಕೇಶ್, ಲಕ್ಷ್ಮೀ, ಪ್ರಕಾಶ್ ಮತ್ತಿತರರಿದ್ದರು.

ನರೇಗಾ ಎಡಿಎ ಭೇಟಿ: ಪ್ರತಿಭಟನಾ ಸ್ಥಳಕ್ಕೆ ತಾಪಂ ನರೇಗಾ ಎಡಿಎ ಅರವಿಂದ್ ಭೇಟಿ ನೀಡಿ ನಿವಾಸಿಗಳ ಮನವಿ ಆಲಿಸಿದರು. ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಏನೇನು ಕೆಲಸ ಆಗಬೇಕಿದೆ ಎಂಬುದನ್ನು ಖುದ್ದಾಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.