ಜಿಲ್ಲೆ

ಗ್ರಾಮದೇವತೆ ಉತ್ಸವ ಮೌಢ್ಯರಹಿತವಾಗಿರಲಿ

ಹರಿಹರ: ಮಾ.18 ರಿಂದ 22ರ ವರೆಗೆ ನಡೆಯುವ ಹರಿಹರ ಗ್ರಾಮದೇವತೆ (ಊರಮ್ಮ) ಉತ್ಸವವನ್ನು ಮೌಢ್ಯರಹಿತವಾಗಿ ಆಚರಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಪೊ›.ಬಿ.ಕೃಷ್ಣಪ್ಪ) ತಾಲೂಕು ಘಟಕದಿಂದ ಗ್ರೇಡ್-2 ತಹಸೀಲ್ದಾರ್ ಪುಷ್ಪಾವತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಮಿತಿ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಐದು ದಿನಗಳ ಕಾಲ ಉತ್ಸವದ ಹೆಸರಲ್ಲಿ ಅಮಾಯಕ ನಾಗರಿಕರು ಮೌಢ್ಯಾಚರಣೆಯಲ್ಲಿ ತೊಡಗುತ್ತಾರೆ. ಕೆಲವರು ಇದಕ್ಕೆ ಪ್ರೇರಣೆ ನೀಡುತ್ತಾರೆ ಎಂದು ದೂರಿದರು.

ನಗರದ ದೇವಸ್ಥಾನ ರಸ್ತೆಯ ಚೌಕಿಮನೆ ಎದುರು ಹಾಗೂ ಇತರೆಡೆ ನೂರಾರು ಪುರುಷರು ಹಾಗೂ ಮಹಿಳೆಯರು ಭಕ್ತಿ, ಹರಕೆಯ ಹೆಸರಲ್ಲಿ ಬೇವಿನ ಉಡುಗೆ ಸೇವೆಯೆಂಬ ಮೌಢ್ಯ ಆಚರಿಸುತ್ತಾರೆ. ಬೇವಿನ ಸೇವೆ ಮಾಡುವುದು ಅನಿವಾರ್ಯವಾದರೆ ಬಟ್ಟೆಗಳ ಮೇಲೆಯೆ ಬೇವನ್ನು ಧರಿಸಿ ಹರಕೆ ಪ್ರಕ್ರಿಯೆ ನೆರವೇರಿಸಬೇಕು ಎಂದರು.

ಕಾನೂನು, ನಿಬಂಧನೆಗಳ ಅನ್ವಯ ದೇವರ ಹೆಸರಲ್ಲಿ ಪ್ರಾಣಿ ಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಉತ್ಸವ ಆಚರಣೆಯ ಹೆಸರಲ್ಲಿ ಬಡಜನರು ಸಾಲದ ಸುಳಿಗೆ ಸಿಲುಕುತ್ತಾರೆ. ಇದನ್ನು ತೀರಿಸಲು ಕುಟುಂಬದ ಸದಸ್ಯರೆಲ್ಲ ಹಲವು ವರ್ಷಗಳವರೆಗೆ ದುಡಿಯಬೇಕಾಗುತ್ತದೆ. ದೇವರಿಗೆ ಭಕ್ತಿ ಮುಖ್ಯವೇ ಹೊರತು ಪ್ರಾಣಿಗಳ ಬಲಿ ನೀಡುವುದಲ್ಲ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲೂ ನಾಗರಿಕರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಲು ಆದ್ಯತೆ ನೀಡುವ ಆಶಯ ವ್ಯಕ್ತಪಡಿಸಲಾಗಿದೆ. ಹೀಗಾಗಿ ಗ್ರಾಮದೇವತೆ ಉತ್ಸವದಲ್ಲಿ ಭಕ್ತಿ, ಭಾವದ ಪರಾಕಾಷ್ಠತೆ ಇರಲಿ, ಮೌಢ್ಯಾಚರಣೆ ತೊಲಗುವಂತೆ ತಾಲೂಕು ಮತ್ತು ಜಿಲ್ಲಾಡಳಿತವು ಬೀದಿ ನಾಟಕ, ಕರಪತ್ರ ವಿತರಣೆ, ಧ್ವನಿವರ್ಧಕದ ಮೂಲಕ ವ್ಯಾಪಕ ಪ್ರಚಾರ ಕಾರ್ಯ ನಡೆಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ಮುಖಂಡರಾದ ಕಡ್ಲೆಗೊಂದಿ ತಿಮ್ಮಣ್ಣ, ಸಂಜೀವ್, ಅಂಜಿನಪ್ಪ, ಪರಶುರಾಮ್ ಧನು ಕುಮಾರ್, ಬಸವರಾಜ್ ಇದ್ದರು.