ಮಂಡ್ಯ: ಒಂದು ದೇಶ ಒಂದು ಚುನಾವಣೆ ವಿಷಯ ಕುರಿತು ಸಮಗ್ರ ಚರ್ಚೆ ನಡೆಸದೆ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಒಂದು ದೇಶ ಒಂದು ಚುನಾವಣೆ ಬಿಜೆಪಿ ಪಕ್ಷದ ಗೌಪ್ಯ ಅಜೆಂಡವಾಗಿದೆ. ಅಲ್ಲದೆ ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ದೇಶದ ಜನರ ಅಭಿಪ್ರಾಯವೂ ಸಹ ವಿರುದ್ಧವಾಗಿದೆ. ಆದರೂ ಸಹ ಕೇಂದ್ರ ಸಚಿವ ಸಂಪುಟ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರುವುದು ಸರಿಯಲ್ಲ ಎಂದರು.
ದೇಶದಲ್ಲಿ ಒಂದೇ ಬಾರಿಗೆ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆ ನಡೆಸುವ ಸಾಮರ್ಥ್ಯ ಚುನಾವಣಾ ಆಯೋಗಕ್ಕೆ ಇಲ್ಲ. ಚುನಾವಣಾ ವ್ಯವಸ್ಥೆ ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾದ ಅವಶ್ಯಕತೆ ಇರುತ್ತದೆ. ಇದಲ್ಲದೆ ಇದನ್ನು ಆತುರದಿಂದ ಮಾಡುವ ಕೆಲಸವಲ್ಲ. ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ತರಬೇಕಾದರೆ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಜತೆಗೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಇದೆಲ್ಲವೂ ಗೊತ್ತಿದ್ದರೂ ಜನರಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆಂದು ಆರೋಪಿಸಿದರು.
ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೆ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಶಾಸಕ ಮುನಿರತ್ನ ಅವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಅದೇ ರೀತಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಮುನಿರತ್ನ ಸಹಚರರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಮುಖಂಡರಾದ ನಿಂಗಪ್ಪ, ಶಿವಕುಮಾರ್, ಸಿದ್ದು, ಕೃಷ್ಣಪ್ಪ, ಸೋಮರಾಜ್ ಇದ್ದರು.