ಮಂಡ್ಯ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಹಣ ಹಿಂಪಡೆಯುವುದು ಸೇರಿದಂತೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಸರ್‌ಎಂ.ವಿ. ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ 25,396 ಕೋಟಿ ರೂಗಳನ್ನು ಎಸ್.ಸಿ/ಎಸ್.ಪಿ, ಟಿಎಸ್ಪಿ ಯೋಜನೆಗೆ ಹಿಂದಿರುಗಿಸಬೇಕು. ದಲಿತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆ-ಸವಾಲುಗಳ ಕುರಿತು ಒಂದು ವಾರಗಳ ಕಾಲ ವಿಶೇಷ ವಿಧಾನ ಸಭಾ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ, ಬೃಹತ್ ಮಹಾನಗರ ಪಾಲಿಕೆಗಳು, ನಗರ ಪಾಲಿಕೆಗಳು, ಪುರಸಭೆಗಳಲ್ಲೂ ಒಂದು ವಾರಗಳ ಕಾಲ ಈ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಸಭೆಗಳನ್ನು ನಡೆಸಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳನ್ನು ಮರುರೂಪಿಸಬೇಕು. ಆಯಾ ಜಿಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಆಧರಿಸಿ ಉದ್ಯೋಗ ಸೃಷ್ಟಿಸುವಂತಹ ಯೋಜನೆಗಳನ್ನು ರೂಪಿಸಬೇಕು. ಕಳದೆ 10 ವರ್ಷಗಳ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಮತ್ತು ಅನುಷ್ಠಾದ ಬಗ್ಗೆ ತಜ್ಞರ ಸಮಿತಿ ರಚಿಸಿ ಮೌಲ್ಯಮಾಪನ ಮಾಡಬೇಕು ಎಂದು ಆಗ್ರಹಿಸಿದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಉಪ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಕಾಯ್ದೆಯ ನಿಯಮದಂತೆ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪಯೋಜನೆಗಳ ಬಗ್ಗೆ ರಾಜ್ಯಾದ್ಯಂತ ಮನೆ ಮನೆಗೂ ಜಾಗೃತಿ ಮೂಡಿಸಬೇಕು. ಜತೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ವಿಚಕ್ಷಣಾ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಮುಖಂಡರಾದ ಅಂಬೂಜಿ, ವಿಜೇಂದ್ರಕುಮಾರ್, ಕೆ.ಎಸ್.ಶಿವಲಿಂಗಯ್ಯ, ಮಲ್ಲಿಕಾರ್ಜುನಸ್ವಾಮಿ, ಗಿರಿಜಮ್ಮ, ಗೋವಿಂದರಾಜು, ಕೆ.ಪರಶುರಾಮ, ರಾಜೇಶ್ ಭಾಗವಹಿಸಿದ್ದರು.