ಮಂಡ್ಯ: ಮಳವಳ್ಳಿ ತಾಲೂಕು ಹಾಡ್ಲಿ ವೃತ್ತದಲ್ಲಿರುವ ಮದ್ಯದಂಗಡಿಯನ್ನು ರಾಷ್ಟ್ರೀಯ ಹೆದ್ದಾರಿ ಬದಿಯ ಜನವಸತಿ, ಆಸ್ಪತ್ರೆ, ಶಾಲೆ ಇರುವ ಪ್ರದೇಶಕ್ಕೆ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಬಕಾರಿ ಇಲಾಖೆ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಕ್ಕೆ ಮದ್ಯದಂಗಡಿಯನ್ನು ಸ್ಥಳಾಂತರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಸ್ಥಳಾಂತರ ಮಾಡಲು ಉದ್ದೇಶಿಸಿರುವ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಓಡಾಡುತ್ತಾರೆ. ಮಾತ್ರವಲ್ಲದೆ ಪಶು ಚಿಕಿತ್ಸಾಲಯ, ಅರುಣೋದಯ ವಿದ್ಯಾಸಂಸ್ಥೆ, ವಾಸದ ಮನೆಗಳಿವೆ. ಅಷ್ಟೇ ಅಲ್ಲದೆ 50 ಅಡಿ ದೂರದಲ್ಲಿ ಕೆಇಬಿ ಸ್ಟೇಷನ್ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಪ್ರದೇಶಕ್ಕೆ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ಅಬಕಾರಿ ಇಲಾಖೆ ಉಪ ಅಧೀಕ್ಷಕಿ ಮಹದೇವಿಬಾಯಿ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಮಲ್ಲಿಕಾರ್ಜುನಸ್ವಾಮಿ, ಚಿಕ್ಕತಾಯಮ್ಮ, ಸಾವಿತ್ರಮ್ಮ, ಸುಶೀಲಮ್ಮ, ಕಾಮಾಕ್ಷಮ್ಮ, ಸಾಕಮ್ಮ, ಸಮೀದಾ ಇತರರಿದ್ದರು.