ಜಿಲ್ಲೆ

ದಲಿತ ಮಹಾಸಭಾದಿಂದ ರಂಗಾಯಣಕ್ಕೆ ಮುತ್ತಿಗೆ ಎಚ್ಚರಿಕೆ

ಮೈಸೂರು: ಟಿಪ್ಪು ಸುಲ್ತಾನ್ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ರಚಿಸಲಾಗಿರುವ ‘ಟಿಪ್ಪುವಿನ ನಿಜ ಕನಸುಗಳು’ ನಾಟಕ ಕೃತಿಯನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು. ರಂಗಾಯಣ ಒಂದುವೇಳೆ ನಾಟಕವನ್ನು ಪ್ರದರ್ಶಿಸಿದರೆ ಮತ್ತಿಗೆ ಹಾಕಲಾಗುವುದು ಎಂದು ದಲಿತ ಮಹಾಸಭಾ ಅಧ್ಯಕ್ಷ ಎಸ್. ರಾಜೇಶ್ ಎಚ್ಚರಿಸಿದರು.

ಬ್ರಿಟೀಷರೊಂದಿಗೆ ರಾಜಿ ಮಾಡಿಕೊಳ್ಳದೆ ಅವರ ವಿರುದ್ಧ ನಾಲ್ಕು ಯುದ್ಧಗಳನ್ನು ಮಾಡಿ ಮಡಿದ ವೀರ ಟಿಪ್ಪು ಸುಲ್ತಾನ್. ಕೇರಳದ ದಲಿತ ಮಹಿಳೆಯರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಟಪ್ಪು ಮಾಡಿದರು. ಶ್ರೀರಂಗಪಟ್ಟಣದ ರಂಗಸ್ವಾಮಿ ದೇವಸ್ಥಾನ ಮತ್ತು ಶೃಂಗೇರಿ ಶಾರದಾ ಪೀಠಕ್ಕೆ ದತ್ತಿಯನ್ನು ನೀಡಿದರು. ಶೃಂಗೇರಿ ಮೇಲೆ ದಾಳಿ ನಡೆಸಲು ಮರಾಠಿಗರು ಬಂದ ಸಂದರ್ಭ ರಕ್ಷಣೆ ನೀಡಿದ್ದು ಟಿಪ್ಪು. ಈ ಅಂಶಗಳನ್ನು ಕಾರ್ಯಪ್ಪ ಮರೆ ಮಾಚಿ ಸುಳ್ಳುಗಳೇ ತುಂಬಿದ ಕೃತಿ ರಚಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಟಿಪ್ಪು ಸುಲ್ತಾನ್ 100 ಅಡಿ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಹೇಳಿಕೆ ನೀಡಿದ್ದಾರೆ. ನಾಡಿಗೆ ಅಪಾರವಾದ ಕೊಡುಗೆ ನೀಡಿರುವ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ರಸೂಲ್, ಆರ್. ರಮೇಶ್, ರಾಮಕೃಷ್ಣ, ಸೈಯದ್ ಫಾರೂಕ್ ಇದ್ದರು.