ಜಿಲ್ಲೆ

ದಲಿತರಿಗೆ ವಿವಿಧ ಸೌಲಭ್ಯಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಲು ಆಗ್ರಹಿಸಿ ಹಗರಿಬೊಮ್ಮನಹಳ್ಳಿಯಲ್ಲಿ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ: ಮಸಣ ಕಾರ್ಮಿಕರು, ವಿಮುಕ್ತ ದೇವದಾಸಿಯರು ಹಾಗೂ ದಲಿತರಿಗೆ ವಿವಿಧ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ, ದೇವದಾಸಿ ವಿಮೋಚನಾ ಸಂಘ, ಮಸಣ ಕಾರ್ಮಿಕರ ಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ದೇವದಾಸಿ ವಿಮೋಚನಾ ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ರಾಜ್ಯದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸೌಲಭ್ಯ ದಲಿತರಿಗೆ ಸಿಗುತ್ತಿಲ್ಲ. ಯೋಜನೆ ಸಮರ್ಪಕ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ವಸತಿ, ಭೂಮಿ, ಪಿಂಚಣಿ, ನಿರುದ್ಯೋಗ ಭತ್ಯೆ, ಸಾಲ ಸೇರಿ ವಿವಿಧ ಸೌಲಭ್ಯಗಳಿಗಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.

ವಿಮುಕ್ತ ದೇವದಾಸಿಯರಿಗೆ 5000 ರೂ. ಪಿಂಚಣಿ, 5 ಎಕರೆ ಕೃಷಿ ಭೂಮಿ ನೀಡಬೇಕು. ದೇವದಾಸಿ ಪುನರ್ವಸತಿ ನಿಗಮದಿಂದ ಕೊಟ್ಟ ಎಲ್ಲ ಸಾಲ ಮನ್ನಾ ಮಾಡಬೇಕು. ಪ್ರತಿ ಮಸಣಕ್ಕೆ ಒಬ್ಬ ಕಾರ್ಮಿಕ ನೇಮಕಕ್ಕೆ ಕ್ರಮ ಜರುಗಿಸಬೇಕು. 45 ವರ್ಷ ಆದವರಿಗೆ 3000 ರೂ. ಮಾಸಾಶನ ನೀಡಬೇಕು. ಸ್ಮಶಾನ ಭೂಮಿ, ವಸತಿ ರಹಿತರಿಗೆ ನಿವೇಶನ, ಮನೆ ಗುಂಪುಸಾಲ, ಕಿರುಸಾಲ ಯೋಜನೆ ಜಾರಿಗೆ ಹೆಚ್ಚಿನ ಹಣ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐಎಂ ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ ಮಾತನಾಡಿದರು. ಬಳಿಕ ತಾಲೂಕು ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಆರ್.ಎಸ್.ಬಸವರಾಜ, ದೇವದಾಸಿ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷೆ ಬಿ.ಮೈಲಮ್ಮ, ಪಿ.ಚಾಂದಬೀ, ಪುಷ್ಪಾ, ಪರಶುರಾಮ, ನಾಗೇಂದ್ರಪ್ಪ, ಲಿಂಗರಾಜ, ಜಿ.ಆರ್.ಮಲ್ಲಮ್ಮ, ಬಿ.ಜ್ಯೋತಿ ಇತರರಿದ್ದರು.