ವಿಜಯವಾಣಿ ಸುದ್ದಿಜಾಲ ತುಮಕೂರು
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೀಸಲಾತಿ ನಿಲ್ಲಿಸುವ ವಿಚಾರವಾಗಿ ಹೇಳಿಕೆ ನೀಡಿ, ದಲಿತ ವಿರೋಧಿ ಧೋರಣೆ ತೋರಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ನವರು ದಲಿತರ ಅಭಿವೃದ್ಧಿಗೆ ಮೀಸಲಾದ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗಾಗಿ ಬಳಸಿಕೊಂಡು ಈ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ. ಪರಿಶಿಷ್ಟ ಜಾತಿಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗಾಗಿ ಯಾವುದೇ ಸಮರ್ಪಕವಾದ ಯೋಜನೆ ಜಾರಿಗೆ ತಂದಿಲ್ಲ, ಕೇವಲ ದಲಿತರನ್ನು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ. ಈಗ ದಲಿತರ ಮೀಸಲಾತಿ ಸ್ಥಗಿತಗೊಳಿಸುವ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಹಾಗೆ ಮಾಡಲು ದಲಿತರು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು.
ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹಂತೇಶ ನಾಯಕ ಮಾತನಾಡಿ, ರಾಹುಲ್ಗಾಂಧಿ ಅವರು ಅಮೆರಿಕ ಪ್ರವಾಸದ ವೇಳೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇವೆ, ಮೀಸಲಾತಿ ತೆಗೆದು ಹಾಕಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂಬ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿತೇ ಹೊರತು, ದಲಿತರ ಏಳಿಗೆಗೆ ಕಾಳಜಿವಹಿಸಲಿಲ್ಲ, ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಆಡಳಿತದಲ್ಲಿ ದಲಿತ ವರ್ಗದ ಪರಿಸ್ಥಿತಿ ಸುಧಾರಣೆಯಾಗಿಲ್ಲ, ಮುಂದಿನ ಚುನಾವಣೆಗಳಲ್ಲಿ ದಲಿತರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. ಸಂವಿಧಾನದ ಪುಸ್ತಕ ಹಿಡಿದುಕೊಂಡು ನಾವು ಸಂವಿಧಾನ ರಕ್ಷಕರು, ಬಿಜೆಪಿಯವರು ಸಂವಿಧಾನ, ದಲಿತ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ದಲಿತ ಸಮುದಾಯದವರು ಈಗ ಪ್ರಜ್ಞಾವಂತರಾಗಿದ್ದಾರೆ. ಕಾಂಗ್ರೆಸ್ ನಾಯಕರ ಸುಳ್ಳು ಮಾತುಗಳನ್ನು ನಂಬುವುದಿಲ್ಲ ಎಂದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮುಖಂಡರಾದ ಎಸ್.ಶಿವಪ್ರಸಾದ್, ಬಂಬೂ ಮೋಹನ್, ಹನುಮಂತರಾಯಪ್ಪ, ರಾಕೇಶ್, ಧನುಷ್ ನಾಯಕ್, ಸತ್ಯಮಂಗಲ ಜಗದೀಶ್, ಬೆಳಗುಂಬ ವೆಂಕಟೇಶ್, ಕೆ.ಎಸ್.ಕುಮಾರ್, ಜಿ.ಗಂಗಾಧರ್, ವೀರಣ್ಣ, ವೆಂಕಟೇಶಾಚಾರ್, ಸಣ್ಣರಂಗಯ್ಯ, ದಿಲೀಪ್ ಮತ್ತಿತರರು ಇದ್ದರು.
ದಲಿತ ಮತಗಳಿಂದಲೇ ದೇಶದಲ್ಲಿ ಅತೀ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಮೀಸಲಾತಿ ವಿರುದ್ಧ ಮಾತನಾಡುತ್ತಿರುವುದು ಖಂಡನೀಯ. ದಲಿತ ಸಮುದಾಯದ ವಿರುದ್ಧ ಕಾಂಗ್ರೆಸ್ ನಡೆದುಕೊಳ್ಳಲು ದೇಶದಲ್ಲಿರುವ ಬಹುಸಂಖ್ಯಾತ ದಲಿತ ಸಮುದಾಯ ಅವಕಾಶ ನೀಡುವುದಿಲ್ಲ. ರಾಹುಲ್ಗಾಂಧಿ ಅಮೆರಿಕದಲ್ಲಿ ನೀಡಿರುವ ಹೇಳಿಕೆ ವಾಪಸ್ ಪಡೆಯಬೇಕು.| ವೈ.ಎಚ್.ಹುಚ್ಚಯ್ಯ ಜಿಪಂ ಮಾಜಿ ಅಧ್ಯಕ್ಷ