ಮುಳಬಾಗಿಲು: ತಾಲೂಕು ಜೆಡಿಎಸ್ನಲ್ಲಿ 2024ರಲ್ಲಿ ಉಂಟಾಗಿದ್ದ, ಶಾಸಕ ಸಮೃದ್ಧಿ ವಿ.ಮಂಜುನಾಥ್ ಮತ್ತು ಜೆಡಿಎಸ್ ಮುಖಂಡರ ನಡುವಿನ ತೆರೆಮರೆಯ ವೈಮನಸಿನ ದಟ್ಟ ಇಬ್ಬನಿ ಕರಗಿಸಲು ನಡೆಯುತ್ತಿರುವ ಪ್ರಯತ್ನಗಳು ವರ್ಷದ ಕೊನೇ ದಿನ ಸುಖಾಂತ್ಯ ಕಂಡಿದ್ದು, ರಾಜಕೀಯ ವಾತಾವರಣ ಗೋಚರವಾಗುತ್ತಿದೆ.
ಶಾಸಕರೊಂದಿಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್. ನಾಗರಾಜ್ ಸೇರಿ ಹಲವು ಮುಖಂಡರು 2024ರ ಆರಂಭದಿಂದ ಅಂತರ ಕಾಯ್ದುಕೊಂಡು ಒಳಗೊಳಗೆ ಬುಸುಗುಟ್ಟುತ್ತಿದ್ದರು. ಇದನ್ನು ಸರಿಪಡಿಸಲು ಎರಡು&ಮೂರು ಸಂಧಾನ ಸಭೆಗಳು ನಡೆದರೂ, ಪೂರ್ಣ ಪ್ರಮಾಣದ ಹೊಂದಾಣಿಕೆ ಸಾಧ್ಯವಾಗಿರಲಿಲ್ಲ. ಒಂದುಬಾರಿ ಹೈದರಾಬಾದ್ನಲ್ಲಿ, ಮತ್ತೊಮ್ಮೆದೆಹಲಿಯಲ್ಲಿ, ಇತ್ತೀಚಿಗೆ ದುಬೈ ಪ್ರವಾಸದ ನೆಪದಲ್ಲಿ ಶಾಸಕರೊಂದಿಗೆ ಮುಖಂಡರು ತೆರಳಿ ಸಂಧಾನ ಸಭೆಗಳು ನಡೆದು ಇತ್ತೀಚಿಗೆ ತಾಲೂಕಿನ ಕೆ.ಬೈಯಪಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆಪದಲ್ಲಿ ಎಲ್ಲರೂ ಒಂದಾದರು. ವರ್ಷ ಆರಂಭದಿಂದ ತಾಪಂ ಮಾಜಿ ಅಧ್ಯಕ್ಷ ಎಂ.ಎಸ್. ಶ್ರೀನಿವಾಸರೆಡ್ಡಿ ಮಾತ್ರ ಶಾಸಕರ ಕಡೆಗೆ ಸುಳಿಯದೇ ಅಂತರ ಕಾಯ್ದುಕೊಂಡಿದ್ದು, ಹಾಗೆ ಉಳಿದ್ದಿದ ದಟ್ಟ ಮಂಜನ್ನು ಮುಖಂಡರ ಸತತ ಪ್ರಯತ್ನದ ಫಲವಾಗಿ ಮಂಗಳವಾರ ಕರಗಿಸಲಾಗಿದೆ.
ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿನಿಗೇನಹಳ್ಳಿ ಜಿ.ಆನಂದರೆಡ್ಡಿ, ಜಿಪಂ ಮಾಜಿ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ಮುಖಂಡ ಕಲ್ಲುಪಲ್ಲಿ ಪ್ರಕಾಶ್ ಸೇರಿ ಜೆಡಿಎಸ್ನ ಅಹಿಂದ ಪ್ರಮುಖರ ಅಂತರ ಕಂಡಿದ್ದು ಸುಳ್ಳಲ್ಲ.
ಸಂಧಾನ ಸಭೆ
ಮುಳಬಾಗಿಲಿನ ಮುತ್ಯಾಲಪೇಟೆಯ ತಾಪಂ ಮಾಜಿ ಅಧ್ಯಕ್ಷ ಎಂ.ಎಸ್. ಶ್ರೀನಿವಾಸರೆಡ್ಡಿ ಮನೆಯಲ್ಲಿ ಜೆಡಿಎಸ್ ಮುಖಂಡರಿಗೆ ತಿಂಡಿ ವ್ಯವಸ್ಥೆ ಮಾಡುವಂತೆ ಮೊದಲೇ ತಿಳಿಸಿ, ಸಮಯಕ್ಕೆ ಸರಿಯಾಗಿ ಶಾಸಕ ಸಮೃದ್ಧಿ ಮಂಜುನಾಥ್ ಅವರನ್ನು ಕರೆದುಕೊಂಡು ಬಂದು ರೆಡ್ಡಿಯೊಂದಿಗೆ ಒಗ್ಗೂಡಿಸುವ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ. ಮುಖಂಡರನ್ನು ಒಗ್ಗೂಡಿಸುವಲ್ಲಿ ತಾಪಂ ಮಾಜಿ ಸದಸ್ಯ ಡಾ.ಸಿ.ಎನ್. ಪ್ರಕಾಶ್ ಮತ್ತು ಇತರರು ಪ್ರಯತ್ನ ಮಾಡಿದ್ದು, ಎಲ್ಲರೂ ಒಂದಾದರೂ ರೆಡ್ಡಿ ಮಾತ್ರ ದೂರ ಉಳಿದಿದ್ದು, ಈಗ ಎಲ್ಲರೂ ಒಂದಾಗಿ 2025 ರಿಂದ ತಾಲೂಕು ಜೆಡಿಎಸ್ಅನ್ನು ಸಂಘಟನೆ ಮಾಡುವ ಮೂಲಕ ಮುಂಬರುವ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆ, ಡಿಸಿಸಿ ಬ್ಯಾಂಕ್, ಪಿಎಲ್ಡಿ ಬ್ಯಾಂಕ್ ಸೇರಿ ಸಹಕಾರಿ ಕ್ಷೇತ್ರಗಳ ಚುನಾವಣೆಗಳು, ತಾಪಂ, ಜಿಪಂ ಚುನಾವಣೆಗೆ ಸಕ್ರಿಯಗೊಳ್ಳಲು ಕಾರ್ಯ ಸೂಚಿ ಹಾಕಿಕೊಂಡು, ಪಕ್ಷ ಸಂಘಟನೆ ಆದ್ಯತೆಯೇ ಅಥವಾ ಮತ್ತೆ ಸಂಘಟನಾತ್ಮಕವಾಗಿ ದಳ ದ್ವಿದಳವಾಗಿ ಮುಂದುವರಿಯಲಿದೆ ಎನ್ನಲಾಗಿದೆ.
"ತಾಲೂಕು ಅಭಿವೃದ್ಧಿ ದೃಷ್ಟಿಯಿಂದ ಮತದಾರರು ನಿರೀಕ್ಷೆ ಇಟ್ಟುಕೊಂಡು ಜೆಡಿಎಸ್ ಕಾರ್ಯಕರ್ತರು ಮುಖಂಡರು ಮಾತು ನಂಬಿ, ಮತ ನೀಡಿ ಶಾಸಕರನ್ನು ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡಬಾರದು, ಆದ್ದರಿಂದ ಎಲ್ಲರೂ ಒಂದಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂಬ ಉದ್ದೇಶದಿಂದ ಹಲವು ಸಭೆಗಳನ್ನು ತೆರೆ ಮೆರೆಯಲ್ಲಿ ಮಾಡಿದ್ದು, ಯಶಸ್ವಿಯಾಗಿದೆ ಮುಂದೆ ಜೆಡಿಎಸ್ ಮತ್ತಷ್ಟು ಪ್ರಬಲವಾಗಲಿದೆ."
- ಚಾಮರೆಡ್ಡಿಹಳ್ಳಿ ಡಾ.ಸಿ.ಎನ್.ಪ್ರಕಾಶ್, ತಾಪಂ ಮಾಜಿ ಸದಸ್ಯ
"2025ರಲ್ಲಿ ರಾಜಕಾರಣ ಯಾವದಿಕ್ಕಿಗೆ ಕೊಂಡೊಯ್ಯುತ್ತದೆ ಕಾದು ನೋಡಬೇಕು. ಮಾರ್ಗದರ್ಶಕರು ಹಾಗಿದ್ದ ಸಚಿವ ಕೆ.ಎಚ್.ಮುನಿಯಪ್ಪ ಸೇರಿ ಹಲವು ಕಾಂಗ್ರೆಸ್ ಮುಖಂಡರು ಆಹ್ವಾನಿಸುತ್ತಿದ್ದಾರೆ. ಅದೇ ರೀತಿ ಜೆಡಿಎಸ್ನಲ್ಲೂ ಸಕ್ರಿವಾಗಿ ತೊಡೆದುಕೊಳ್ಳಲು ಒತ್ತಡ ಇದೆ. ಮುಂಬರುವ ಚುನಾವಣೆಗಳೇ ರಾಜಕೀಯ ದಿಕ್ಕನ್ನು ಬದಲಾಯಿಸುತ್ತವೆ."
- ಶಿನಿಗೇನಹಳ್ಳಿ ಜಿ.ಆನಂದರೆಡ್ಡಿ, ಜೆಡಿಎಸ್ ಮುಖಂಡ