'Dakshinakashi' still film for Nadahabba 
ಜಿಲ್ಲೆ

ವಿಶ್ವವಿಖ್ಯಾತ ನಾಡಹಬ್ಬಕ್ಕೆ ‘ದಕ್ಷಿಣಕಾಶಿ’ ಸ್ತಬ್ಧಚಿತ್ರ

ಗ್ರಾಮಾಂತರ ಜಿಲ್ಲೆಯಿಂದ ಪ್ರದರ್ಶನ

ನೆಲಮಂಗಲದ ‘ಶಿವಗಂಗೆ’ಆಯ್ಕೆ

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕಳೆದ ದಸರಾ ಜಂಬೂ ಸವಾರಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಗಂಗರಸರ ರಾಜಧಾನಿ ಮಣ್ಣೆ (ಮಾನ್ಯಖೇಡ) ಸ್ತಬ್ಧಚಿತ್ರ ವಿಶೇಷವಾಗಿ ಗಮನ ಸೆಳೆದಿತ್ತು. ಈ ಬಾರಿಯ ದಸರಾ ಜಂಬೂಸವಾರಿಗೆ ದಕ್ಷಿಣ ಕಾಶಿಯೆಂದೇ ಸುಪ್ರಸಿದ್ಧವಾಗಿರುವ ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿಯ ಶಿವಗಂಗೆ ಸ್ತಬ್ಧಚಿತ್ರದ ತಯಾರಿ ಭರದಿಂದ ಸಾಗಿದೆ.
ಮೈಸೂರು ದಸರಾ ಮಹೋತ್ಸವದಲ್ಲಿ ಅ.24 ರಂದು ನಡೆಯಲಿರುವ ಜಂಬೂಸವಾರಿಯಲ್ಲಿ 31 ಜಿಲ್ಲೆಯ ಜಿಲ್ಲಾ ಪಂಚಾಯಿತಿಯಿಂದ ಆಯಾ ಜಿಲ್ಲೆಯ ಪ್ರಾಕೃತಿಕ, ಭೌಗೋಳಿಕ ಹಾಗೂ ವಿಶೇಷವಾಗಿ ಐತಿಹಾಸಿಕ ಮಾನ್ಯತೆ ಪಡೆದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಈ ಬಾರಿ ಶಿವಗಂಗೆಯ ಸ್ತಬ್ಧಚಿತ್ರ ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ.
ಶಿವಗಂಗೆಗೆ ಒಲಿದ ಅದೃಷ್ಟ: ದಸರಾ ಉತ್ಸವ ಸಮಿತಿ ನಿಯಮಗಳಂತೆ ಜಿಪಂನಿಂದ ಜಿಲ್ಲೆಯ ಇತಿಹಾಸ ತಜ್ಞರು, ಕಲಾವಿದರು, ಸಾಹಿತಿಗಳಿಂದ ಈ ಬಗ್ಗೆ ಎರಡು ತಿಂಗಳ ಹಿಂದೆಯೇ ಸಲಹೆ ಸೂಚನೆ ಆಹ್ವಾನಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ 8ಕ್ಕೂ ಹೆಚ್ಚು ತಾಣಗಳ ಬಗ್ಗೆ ಸಲಹೆಗಳು ಬಂದಿದ್ದವು. ನೆಲಮಂಗಲದ ಶಿವಗಂಗೆ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ, ಮಾಕಳಿ ದುರ್ಗ, ದೇವನಹಳ್ಳಿಯ ಕೊಯಿರಾ, ಹುಲುಕುಡಿ ಬೆಟ್ಟ, ದೇವನಹಳ್ಳಿ ಕೋಟೆ ಪ್ರಮುಖವಾಗಿದ್ದವು. ಇದರಲ್ಲಿ ಶಿವಗಂಗೆಗೆ ಅದೃಷ್ಟ ಲಭಿಸಿದೆ. ಕಳೆದ ಬಾರಿ ಕೆಐಎಡಿಬಿಯ ಏರೋಸ್ಪೇಸ್, ಬಿಂದಾಜಿಪುರದ ವೀಣೆ ತಯಾರಿಕೆ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಮ ಆಯ್ಕೆ ಮಾಡಿ ದಸರಾ ಉತ್ಸವ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಇವುಗಳನ್ನು ಪರಿಶೀಲನೆ ನಡೆಸಿದ ಸಮಿತಿಯಿಂದ ಅಂತಿಮವಾಗಿ ಮಣ್ಣೆ ಆಯ್ಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಮೈಸೂರಿನ ಎಪಿಎಂಸಿಯಲ್ಲಿ ಜಾಗ: ಜಿಲ್ಲೆಯ ಕಲಾವಿದರ ತಂಡವೊಂದು ಸ್ತಬ್ಧಚಿತ್ರ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಅಂತಿಮ ಸ್ಪರ್ಶಕ್ಕೆ ಮೈಸೂರಿನ ಎಪಿಎಂಸಿ ಮೈದಾನದಲ್ಲಿ ದಸರಾ ಉತ್ಸವ ಸಮಿತಿ ಜಾಗ ಗುರುತಿಸಿಕೊಟ್ಟಿದೆ. ಅಲ್ಲಿ ಸಂಪೂರ್ಣವಾಗಿ ತಯಾರಾಗಲಿದೆ.

ದಕ್ಷಿಣ ಕಾಶಿ ಮರುಸೃಷ್ಟಿ: ಸ್ತಬ್ಧಚಿತ್ರದಲ್ಲಿ ಮೊದಲಿಗೆ ನಂದಿ ಎದುರು ಆಸೀನರಾಗಿರುವ ಶಿವಪಾರ್ವತಿಯ ದರ್ಶನ, ನಂತರದಲ್ಲಿ ಶ್ರೀ ಹೊನ್ನಮ್ಮದೇವಿ ಗಂಗಾಧರೇಶ್ವರ ಸ್ವಾಮಿ ದೇಗುಲ, ಬೆಟ್ಟದ ಮಧ್ಯೆ ಸಿಗುವ ಗೋಪುರಗಳು, ಬೆಟ್ಟದ ತುದಿಯಲ್ಲಿರುವ ಬಸವಣ್ಣನ ವಿಗ್ರಹ, ಕುದುರೆ ಮೇಲೆ ಹೊರಟಿರುವ ನಾಡಪ್ರಭು ಕೆಂಪೇಗೌಡರ ಚಿತ್ರಣ, ಸುತ್ತಮುತ್ತಲ ಬೆಟ್ಟದ ವಿಹಂಗಮ ಚಿತ್ರಣ, ಕಡೆಯಲ್ಲಿ ನಂದಿ ಆಸೀನವಾಗಿರುವ ಪ್ರವೇಶದ್ವಾರದ ಚಿತ್ರಣದ ನೀಲಿನಕ್ಷೆಯಂತೆ ಸ್ತಬ್ಧಚಿತ್ರ ತಯಾರಾಗಲಿದ್ದು ದಕ್ಷಿಣ ಕಾಶಿಯ ಮರುಸೃಷ್ಟಿಯನ್ನು ಕಣ್ತುಂಬಿಕೊಳ್ಳಬಹುದು.


ದಸರಾ ಉತ್ಸವದಲ್ಲಿ ಜಿಲ್ಲೆಯಿಂದ ವಿಶೇಷ ಎನಿಸುವಂಥ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಶಿವಗಂಗೆ ಆಯ್ಕೆಯಾಗಿದ್ದು, ಮೈಸೂರಿನಲ್ಲಿ ಸ್ತಬ್ಧಚಿತ್ರ ತಯಾರಿ ನಡೆದಿದೆ. ಶಿವಗಂಗೆಯ ಇತಿಹಾಸ ಪರಿಚಯ, ಪ್ರಾಕೃತಿಕ ಸೌಂದರ್ಯ, ಭೌಗೋಳಿಕ ರೂಪವನ್ನು ಅನಾವರಣಗೊಳಿಸುವ ಅವಕಾಶ ಲಭಿಸಿದೆ.

ಮಹಮದ್ ರಫೀಕ್, ಉಪನಿರ್ದೇಶಕ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ

ಶಿವಗಂಗೆ ಆಯ್ಕೆಯಾಗಿರುವುದು, ನಾಡಹಬ್ಬದಲ್ಲಿ ಪ್ರದರ್ಶನ ಕಾಣುವುದು ನಿಜಕ್ಕೂ ತುಂಬಾ ಹೆಮ್ಮೆ, ಸಂತೋಷ ಎನಿಸುತ್ತದೆ, ಬಹಳ ವರ್ಷದ ಹಿಂದೆ ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಶಿವಗಂಗೆ ಸ್ತಬ್ಧಚಿತ್ರ ಪ್ರದರ್ಶನಗೊಂಡಿತ್ತು. ಈ ಬಾರಿ ನಾಡಹಬ್ಬದಲ್ಲಿ ಪ್ರದರ್ಶನ ಕಾಣುತ್ತಿರುವುದು ನಮ್ಮ ಜಿಲ್ಲೆಯ ಹಿರಿಮೆಗೆ ಗರಿ ಮೂಡಿಸಿದಂತಾಗಿದೆ. ಈ ಮೂಲಕ ಶಿವಗಂಗೆ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ.
ರಾಜು ದೀಕ್ಷಿತ್, ಪ್ರಧಾನ ಅರ್ಚಕ ಶಿವಗಂಗೆ