ಮಂಗಳೂರು: ಪಂಪ ಕನ್ನಡ ಭಾಷೆಗೆ ಶ್ರಮಿಸಿದಂತೆ ಪ್ರೊ.ಅಮೃತ ಸೋಮೇಶ್ವರ ಅವರು ತುಳು ಭಾಷಾ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ವಿಭಾಗ ಸಂತ ಅಲೋಶಿಯಸ್ ಪರಿಗಣಿತ ವಿವಿ ಜತೆಯಲ್ಲಿ ಕಲಾಗಂಗೋತ್ರಿ, ರಂಗಸಂಗಾತಿ, ಬಹುರೂಪಿ ಫೌಂಡೇಶನ್, ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರ ನಿಟ್ಟೆ ವಿವಿ ಹಾಗೂ ಪ್ರೊ.ಅಮೃತ ಸೋಮೇಶ್ವರ ಕುಟುಂಬಸ್ಥರು ಜತೆಗೂಡಿ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ ಅಮೃತ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಭಾಷೆಯಲ್ಲಿ ಸಮರ್ಥವಾದ ಕವಿ, ಲೇಖಕ ಇದ್ದಾಗ ಮಾತ್ರ ಈ ಭಾಷೆ ಸಮೃದ್ಧವಾಗಿ ಬೆಳರಯಲು ಸಾಧ್ಯವಿದೆ. ಮಾನವೀಯತೆ, ಮನುಷ್ಯತ್ವ ಮಿಗಿಲಾದ ಧರ್ಮ ಇನ್ನೊಂದಿಲ್ಲ. ದೇವರು, ಧರ್ಮಕ್ಕಿಂತ ನಿಜವಾದ ಧರ್ಮ ಮಾನವೀಯತೆ ಎನ್ನುವ ರೀತಿಯಲ್ಲಿ ಪ್ರೊ.ಅಮೃತ ಸೋಮೇಶ್ವರ ಅವರು ತಮ್ಮ ಕೃತಿಗಳ ಮೂಲಕ ತೋರಿಸಿದ್ದಾರೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಪ್ರೊ.ಅಮೃತ ಸೋಮೇಶ್ವರ ಅವರು ಅಧ್ಯಾಪನ ವೃತ್ತಿಯ ಮೂಲಕ ವಿದ್ಯಾರ್ಥಿಗಳಿಗೆ ಬರೀ ಶಿಕ್ಷಣ ಮಾತ್ರವಲ್ಲದೇ ತುಳು ಸಂಸ್ಕೃತಿ, ಭಾಷೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ. ಅವರು ರಚಿಸಿದ ಭಕ್ತಿ ಗೀತೆಗಳಲ್ಲಿ ಎಲ್ಲವೂ ದೇವರುಗಳ ವರ್ಣನೆ ಕಾಣಿಸಿಕೊಂಡಿದೆಯೇ ಹೊರತು ದೇವರಲ್ಲಿ ಬೇಡುವ ವಿಚಾರ ಇಲ್ಲ. ಶುದ್ಧ ಭಕ್ತಿಯ ಹಾದಿ ಅವರದ್ದಾಗಿತ್ತು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್ ಮಾತನಾಡಿ, ಅಮೃತರು ನಾಟಕಗಳನ್ನು ತುಳುವಿನಲ್ಲೇ ಹೆಚ್ಚು ಬರೆದರು. ಆದರೆ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಇದನ್ನು ಮಾಡಿದ್ದರೆ ಅವರು ಕಂಬಾರ, ಗಿರೀಶ್ ಕಾರ್ನಾಡ್ ಅವರ ಸಾಲಿನಲ್ಲಿ ಇಂದು ನಿಲ್ಲುತ್ತಿದ್ದರು. ಇಂಗ್ಲೀಷ್, ಕನ್ನಡ ಭಾಷೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರೆ ಅವರು ಈಗ ರಾಷ್ಟ್ರಮಟ್ಟದ ಖ್ಯಾತಿ ಪಡೆಯುತ್ತಿದ್ದರು ಎಂದರು.
ಖ್ಯಾತ ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಭಾಷೆಯ ಯಕ್ಷಗಾನಕ್ಕೆ ಆರಂಭದಲ್ಲಿ ಬಹಳಷ್ಟು ವಿರೋಧವಿತ್ತು. ಆದರೆ ಅಮೃತರು ತುಳು ಕೂಡ ಒಂದು ಭಾಷೆ ಅದನ್ನು ಯಕ್ಷಗಾನದಲ್ಲಿ ಬಳಸಬೇಕು ಎಂದು ಗಟ್ಟಿಯಾಗಿ ಧ್ವನಿ ಎತ್ತಿದರು. ಆರು ಸಂಪುಟದಲ್ಲಿ ಬಂದ ತುಳು ನಿಘಂಟಿನ ವಿಚಾರದಲ್ಲಿ ಅಮೃತರ ಪಾತ್ರ, ಕೊಡುಗೆ ಬಹಳಷ್ಟು ದೊಡ್ಡದಿದೆ. ಅಮೃತ ಮಂಥನದಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಗಿದಾಗ ಅವರ ಕೃತಿ, ಕೊಡುಗೆ ಹೊಸ ಪೀಳಿಗೆಯ ಮಂದಿಗೆ ಅರಿವಿಗೆ ಬರುತ್ತದೆ ಎಂದರು.
ಈ ಸಂದರ್ಭ ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ 2026ನ ಜೂನಿಯರ್ಸ್ ರನ್ನರ್ ಆಪ್ ವಿಜೇತ ಅಚಿಂತ್ಯ ರೈ ಅವರನ್ನು ಅಭಿನಂದಿಸಲಾಯಿತು. ಡಾ.ಚೇತನಾ ಸೋಮೇಶ್ವರ ಪ್ರಸ್ತಾವಿಸಿದರು. ರಾಜೇಶ್ವರಿ ಚೇತನ್ ಸ್ವಾಗತಿಸಿದರು. ಬಹುರೂಪಿ ಫೌಂಡೇಶನ್‌ನ ಜಿ.ಎನ್. ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಈ ಬಳಿಕ ಅಮೃತ ಸಾಹಿತ್ಯದ ಕುರಿತು ವಿವಿಧ ಗೋಷ್ಠಿಗಳು, ಸಂವಾದ, ಅಮೃತಗಾನ ಕಾರ್ಯಕ್ರಮಗಳು ಸಾಗಿತು.