ಕಾಸರಗೋಡು ಜಿಪಂ ಕಚೇರಿ ಆವರಣದಲ್ಲಿ ನಿರ್ಮಾಣಗೊಂಡಿರುವ ತಾಯಿ-ಮಗುವಿನ ಶಿಲ್ಪಕಲಾಕೃತಿ. ಶಿಲ್ಪಿ ಕಾನಾಯಿ ಕುಂಞರಾಮನ್. 
ದಕ್ಷಿಣ ಕನ್ನಡ

ತಾಯಿ-ಮಗು ಕಲಾಕೃತಿ ಪೂರ್ಣ

ಎಂಡೋ ಸಂತ್ರಸ್ತರ ಸ್ಮರಣಾರ್ಥ ಕಾಸರಗೋಡಿನಲ್ಲಿ ನಿರ್ಮಾಣ

ಪುರುಷೋತ್ತಮ ಪೆರ್ಲ

ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಸಂತ್ರಸ್ತರಾಗಿರುವವರ ಸ್ಮರಣಾರ್ಥ ಕಾಸರಗೋಡು ಜಿಲ್ಲಾ ಪಂಚಾಯಿತಿ ಕೇಂದ್ರ ಕಚೇರಿ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತ ‘ತಾಯಿ ಮತ್ತು ಮಗು’ವಿನ ಕಾಂಕ್ರೀಟ್ ಶಿಲ್ಪ ಕಲಾಕೃತಿಯ ಕಾಮಗಾರಿ ಕೊನೆಗೂ ಪೂರ್ತಿಗೊಂಡಿದೆ. ಎರಡು ದಶಕಗಳಿಂದ ಕಾಮಗಾರಿ ನಡೆಯುತ್ತಿದ್ದ ಶಿಲ್ಪಕಲಾಕೃತಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ.

‘ವಿಕ್ಟಿಂ’ ಮತ್ತು ‘ಫ್ರೀಡಂ’ ಹೆಸರಿನ ಕಲಾಕೃತಿಗಳನ್ನು ಖ್ಯಾತ ಶಿಲ್ಪಿ ಕಾನಾಯಿ ಕುಂಞಿರಾಮನ್ ನೇತೃತ್ವದ ತಂಡ ರಚಿಸಿದೆ. ಎಂಡೋ ಸಲ್ಫಾನ್ ಸಂತ್ರಸ್ತ ಮಕ್ಕಳು- ತಾಯಿಯ ರೋದನವನ್ನು ಸೂಚಿಸುವ ಕಾಂಕ್ರೀಟ್ ಶಿಲ್ಪ ನಿರ್ಮಿಸುವ ಬಗ್ಗೆ 2006ರಲ್ಲಿ ಅಂದಿನ ಜಿಪಂ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಆಡಳಿತಾವಧಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

40 ಅಡಿ ಎತ್ತರದ ಶಿಲ್ಪ

ಸಿಮೆಂಟ್, ಇಟ್ಟಿಗೆ ಮತ್ತು ಮರಳನ್ನು ಬಳಸಿ ನಿರ್ಮಿಸಿರುವ 40 ಅಡಿ ಎತ್ತರದ ಕಾಂಕ್ರೀಟ್ ಶಿಲ್ಪ ತಾಯಿ ಮತ್ತು ಸಂತ್ರಸ್ತ ಮಗುವಿನ ಆರ್ತನಾದ ಬಿಂಬಿಸುತ್ತಿದೆ. ವಯೋಸಹಜ ಕಾಯಿಲೆ ನಡುವೆ ವರ್ಷದ ಹಿಂದೆ ಬಿದ್ದು ಗಾಯಗೊಂಡಿದ್ದ ಶಿಲ್ಪಿ ಕುಂಞಿರಾಮನ್ ಸುದೀರ್ಘ ಚಿಕಿತ್ಸೆ ಬಳಿಕ ಪತ್ನಿ ನಳಿನಿ ಸಹಾಯದಿಂದ ಸ್ಥಳಕ್ಕಾಗಮಿಸಿ ಕಾಂಕ್ರೀಟ್ ಶಿಲ್ಪದ ಅಂತಿಮ ಹಂತದ ಕಾಮಗಾರಿಯ ಪ್ರತಿಯೊಂದು ಸೂಕ್ಷ್ಮ ಕೆಲಸವನ್ನೂ ಖುದ್ದು ಪರಿಶೀಲಿಸಿ, ತಮಿಳುನಾಡು ಮಾರ್ತಾಂಡಂನ ನುರಿತ ಕೆಲಸಗಾರರನ್ನು ಬಳಸಿಕೊಂಡು ಅಂತಿಮ ಹಂತದ ಕಾಮಗಾರಿ ಪೂರೈಸಿದ್ದಾರೆ.

ಲೋಕಾರ್ಪಣೆಗೆ ಸಿದ್ಧ

2008ರಿಂದ ಕೆಲಸ ಕಾರ್ಯ ಆರಂಭಗೊಂಡಿದ್ದರೂ, ವಿವಿಧ ಕಾರಣಗಳಿಂದ ಕಾಂಕ್ರೀಟ್ ಶಿಲ್ಪ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿತ್ತು. ಸ್ಥಗಿತಗೊಂಡಿದ್ದ ಕಾಮಗಾರಿಯನ್ನು 2019ರಲ್ಲಿ ಪುನರಾರಂಭಿಸುತ್ತಿದ್ದಂತೆ ಕೋವಿಡ್ ಮಹಾಮಾರಿಯಿಂದ ಮತ್ತೆ ಕೆಲಸ ನಿಲ್ಲಿಸಬೇಕಾಯಿತು. ಪ್ರಸ್ತುತ ಜಿಲ್ಲಾ ಪಂಚಾಯಿತಿಯ ಆಡಳಿತ ಶಿಲ್ಪ ನಿರ್ಮಾಣ ಕಾರ್ಯ ಪೂರ್ತಿಗೊಳಿಸಿ ಲೋಕಾರ್ಪಣೆಗೆ ಸಜ್ಜುಗೊಳಿಸಿದೆ. ನ.13ರಂದು ಬೆಳಗ್ಗೆ 10.30ಕ್ಕೆ ವಿಧಾನಸಭಾ ಸ್ಪೀಕರ್ ತಿರುವಾಂಜೂರ್ ರಾಧಾಕೃಷ್ಣನ್ ಕಲಾಕೃತಿಯನ್ನು ಅನಾವರಣಗೊಳಿಸಲಿದ್ದಾರೆ.

20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ

ಕೈ ಮುಷ್ಟಿ ಹಿಡಿದು ಸಹಾಯ ಯಾಚಿಸುತ್ತಿರುವ ಸಂತ್ರಸ್ತ ತಾಯಿ ಹಾಗೂ ತಾಯಿ ಪಕ್ಕದಲ್ಲೇ ಅಳುತ್ತಿರುವ ಮಗುವಿನ ಚಿತ್ರವನ್ನು ಕಾಂಕ್ರೀಟ್‌ನಲ್ಲಿ ನಿರ್ಮಿಸಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ತರ ಬದುಕು ಮತ್ತು ನೋವಿನ ಸಂಕೇತವಾಗಿ ಜಿಪಂ ನಿರ್ಮಿಸುತ್ತಿರುವ ಐತಿಹಾಸಿಕ ಸ್ಮಾರಕ 18 ವರ್ಷಗಳ ಕಾಯುವಿಕೆ ನಂತರ ಪೂರ್ಣಗೊಂಡಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಕಾಂಕ್ರೀಟ್ ಶಿಲ್ಪದ ಕಾಮಗಾರಿ ಪೂರ್ತಿಗೊಳ್ಳುವುದರೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ನಕ್ಷೆಯಲ್ಲಿ ಶಿಲ್ಪ ಪ್ರಮುಖ ಹೆಗ್ಗುರುತಾಗಿ ಮೂಡಿಬರಲಿದೆ. ಶಿಲ್ಪ ನಿರ್ಮಾಣ ಕಾರ್ಯ ವಿಳಂಬವಾದರೂ, ಕೆಲಸ ಪೂರ್ತಿಗೊಂಡಾಗ ಆತ್ಮತೃಪ್ತಿ ತಂದುಕೊಟ್ಟಿದೆ.
ಕಾನಾಯಿ ಕುಂಞಿರಾಮನ್, ಶಿಲ್ಪಿ