ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಸಾಮಾನ್ಯ ಸಭೆಯಲ್ಲಿ ಸಚಿವ ಯು.ಟಿ.ಖಾದರ್ ಮಾತನಾಡಿದರು. ಡಾ.ಮಂಜುನಾಥ ಭಂಡಾರಿ, ಐವನ್ ಡಿಸೋಜ, ಜೆ.ಆರ್.ಲೋಬೊ, ಕೆ.ಹರೀಶ್ ಕುಮಾರ್ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ಕಾಂಗ್ರೆಸ್ ಪಕ್ಷ ತಳಮಟ್ಟದಿಂದ ಸದೃಢಗೊಳಿಸಲು ಸಚಿವ ಯು.ಟಿ. ಖಾದರ್ ಸೂಚನೆ

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಸಾಮಾನ್ಯ ಸಭೆ

ಮಂಗಳೂರು: ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಪಕ್ಷವು ಈಗಿನಿಂದಲೇ ಪೂರ್ವ ತಯಾರಿ ನಡೆಸಬೇಕು. ಆಯಾ ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ತಳಮಟ್ಟದಿಂದಲೇ ಸದೃಢಗೊಳಿಸುವ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕರೆ ನೀಡಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ನ ಮುಂಚೂಣಿ ಘಟಕಗಳಾದ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಸೇವಾದಳ ಹಾಗೂ ಎನ್‌ಎಸ್‌ಯುಐ ವತಿಯಿಂದ ಜಿಲ್ಲೆಯಲ್ಲಿ ಪ್ರತ್ಯೇಕ ಜಿಲ್ಲಾ ಮಟ್ಟದ ಸಮಾವೇಶಗಳನ್ನು ಆಯೋಜಿಸಿ ಮುಂಚೂಣಿ ಘಟಕಗಳ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗಾಗಿ ಸಂಘಟಿತವಾಗಿ ಶ್ರಮಿಸಬೇಕು ಎಂದು ಸೂಚಿಸಿದರು.

ಮತದಾರರ ಅಂತಿಮ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ಬೂತ್ ಮಟ್ಟದಲ್ಲಿ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟದ ನಿರ್ಣಯಗಳನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ತಿಂಗಳಿಗೆ ಎರಡು ಬಾರಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ, ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್.ಆರ್ ಪೂಜಾರಿ, ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಕಾರ್ಯಕರ್ತರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ನಡೆಸಲಾಗುವುದು ಎಂದು ಹೇಳಿದರು.

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದು ಹಾಗೂ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯನ್ನಾಗಿಸಲು ಮಹತ್ವದ ತೀರ್ಮಾನ ಕೈಗೊಂಡಿರುವುದು ಅಭಿನಂದಿಸಿ ಜಿಲ್ಲೆಯಲ್ಲಿ ಖಾಲಿಯಿರುವ ವಿವಿಧ ನಿಗಮ ಮಂಡಳಿಗಳಿಗೆ ಕಾರ್ಯಕರ್ತರನ್ನು ಶೀಘ್ರದಲ್ಲಿ ನಾಮನಿರ್ದೇಶನಗೊಳಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಎಂ.ಎಸ್.ಮಹಮ್ಮದ್, ಸೃಜನ್ ಸಂಘನ್ ಜಿಲ್ಲಾ ವೀಕ್ಷಕ ಡಾ.ಅಂಶುಮ್ನಾಥ್, ಸತೀಶ್, ಸದಾಶಿವ, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸೇರಿದಂತೆ ಡಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು, ಕೆಪಿಸಿಸಿ ಸದಸ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಮ.ನ.ಪಾ ವಿಜೇತ, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕಗಳ ಮುಖಂಡರ ಸಭೆ ನಡೆಯಿತು.