ಮೊಹಿದ್ದೀನ್ ಶಮ್ಮಾಸ್ 
ದಕ್ಷಿಣ ಕನ್ನಡ

ಆವರಣ ಗೋಡೆ ಕುಸಿದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಕಾರ್ಯಕ್ರಮ ಆಯೋಜಕ ಹಾಗೂ ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ನಗರದ ಎಮ್ಮೆಕೆರೆ ಕ್ರಾಸ್‌ನ ರಮಾಲಕ್ಷ್ಮೀ ನಾರಾಯಣ ಸಭಾಂಗಣದಲ್ಲಿ ಶನಿವಾರ ನಡೆದ ಸರ್ವ ಕಾಲೇಜು ವಿದ್ಯಾರ್ಥಿಗಳ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮದ ವೇಳೆ ಸಭಾಂಗಣದ ಪ್ಯಾಸೇಜ್‌ನ ಆವರಣ ಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡ ವಿದ್ಯಾರ್ಥಿ ಮೊಹಿದ್ದೀನ್ ಶಮ್ಮಾಸ್ (16) ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಈ ಪ್ರಕರಣದಲ್ಲಿ ಸೂರಿಂಜೆ ನಿವಾಸಿ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ ನಿವಾಸಿ ಹನ್ೀ (23), ಕಾವೂರು ಗಾಂಧಿನಗರ ನಿವಾಸಿ ದಾವೂದ್ ರ್ಸಿನ್ ಅಹಮ್ಮದ್ (18) ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪ್ರಕರಣ ವಿವರ: ಪಾಂಡೇಶ್ವರ ಎಮ್ಮೆಕರೆಯಲ್ಲಿರುವ ರಮಾಲಕ್ಷ್ಮೀ ನಾರಾಯಣ ಹಾಲ್‌ನಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇನ್ನಿತರ ಹುದ್ದೆಗಳಿಗೆ ನಡೆದ ಚುನಾವಣೆಯ ಕುರಿತು ಪ್ರಮಾಣ ವಚನ ಕಾರ್ಯಕ್ರಮವನ್ನು ದಿನಕರ ಶೆಟ್ಟಿ ಎಂಬವರು ಆಯೋಜಿಸಿದ್ದರು. ಈ ಸಂದರ್ಭ ರ‌್ಯಾಲಿ ಆಯೋಜಿಸಲಾಗಿತ್ತು. ಒಂದಷ್ಟು ಮಂದಿ ವಿದ್ಯಾರ್ಥಿಗಳು ಕಟ್ಟಡದ ಮೊದಲ ಮಹಡಿಯಲ್ಲಿ ನಿಂತು ಮತ್ತೆ ಕೆಲವರು ಕಟ್ಟಡದ ಕೆಳಗೆ ನಿಂತು ರ‌್ಯಾಲಿ ವೀಕ್ಷಣೆ ಮಾಡುತ್ತಿದ್ದರು. ಈ ಸಂದರ್ಭ ಏಕಾಏಕಿ ತಡೆಗೋಡೆ ಕುಸಿದು ಕೆಳಕ್ಕೆ ಬಿದ್ದಿದ್ದು, ಮೂವರು ವಿದ್ಯಾರ್ಥಿಗಳು ಕೂಡಾ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಕೆಳಗೆ ನಿಂತಿದ್ದ ಶಮ್ಮಾಸ್‌ನ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಅವರ ತಲೆ ಒಡೆದು ಹೋಗಿದೆ. ಎರಡೂ ಕಾಲುಗಳಿಗೆ ಹಾಗೂ ಭುಜಕ್ಕೆ ಗಂಭೀರ ಗಾಯವಾಗಿದೆ. ತಕ್ಷಣ ಅಲ್ಲಿದ್ದ ಮೊಹಮ್ಮದ್ ಶವೈಝ್ ಹಾಗೂ ಇತರರು ಗಾಯಾಳುಗಳನ್ನು ಕಾರುಗಳಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಲಿಸದೆ ರಾತ್ರಿ 11.33ರ ವೇಳೆಗೆ ಶಮ್ಮಾಸ್ ಮೃತಪಟ್ಟಿದ್ದಾರೆ.

ಇಬ್ಬರ ವಿರುದ್ಧ ಪ್ರಕರಣ

ಕಾರ್ಯಕ್ರಮ ಆಯೋಜಕರಾದ ದಿನಕರ ಶೆಟ್ಟಿ ಹಾಗೂ ಶಿಥಿಲಾವಸ್ಥೆಯ ಕಟ್ಟಡದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಅದರ ಮಾಲಿಕ ಪರೀಕ್ಷಿತ್ ರೈ ಎಂಬವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಮ್ಮಾಸ್ ಪ್ರಥಮ ಪಿಯುಸಿ ವಿದ್ಯಾರ್ಥಿ

ಹಳೆಯಂಗಡಿ ಸಾಗು ನಿವಾಸಿ ಇಲ್ಯಾಸ್ ಮತ್ತು ಶಹನಾಝ್ ದಂಪತಿಯ ಇಬ್ಬರು ಮಕ್ಕಳಲ್ಲಿ ಶಮ್ಮಾಸ್ ಎರಡನೇಯವರಾಗಿದ್ದರು. ಅವರು ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದರು. ಶಮ್ಮಾಝ್ ಅವರ ಮೃತದೇಹವನ್ನು ತಡರಾತ್ರಿ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಜೆಪ್ಪುವಿನಲ್ಲಿರುವ ಮನೆಗೆ ತರಲಾಗಿದ್ದು, ಝೀನತ್ ಬಕ್ಷ್ ಮಸೀದಿಯ ಖಬರ್‌ಸ್ತಾನದಲ್ಲಿ ಅಂತಿಮ ವಿಧಿವಿಧಾನ ನಡೆದವು ಎಂದು ಕುಟುಂಬದ ಮೂಲಗಳು ತಿಳಿಸಿವೆ.