ಸ್ಫೂರ್ತಿ ಕಲಾಸಂಭ್ರಮದಲ್ಲಿ ಪರಿಸರಸ್ನೇಹಿ ವಿಧಾನ ಅನುಸರಿಸಲಾಯಿತು. 
ದಕ್ಷಿಣ ಕನ್ನಡ

ಪರಿಸರ ಸಂರಕ್ಷಣೆಗೆ ಸ್ಫೂರ್ತಿ : ಕಲಾಸಂಭ್ರಮದಲ್ಲಿ ಶೂನ್ಯ ತ್ಯಾಜ್ಯಕ್ಕೆ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ಪ್ಲಾಸ್ಟಿಕ್‌ಮುಕ್ತ ಸಮಾಜದ ನಿರ್ಮಾಣದ ಕನಸಿಗೆ ಹೊಸ ಆಯಾಮ
  • ರೋಟರಿ ಕ್ಲಬ್‌ನಿಂದಲೂ ವಿಭಿನ್ನ ಪ್ರಯತ್ನ
  • ಶೂನ್ಯ ತ್ಯಾಜ್ಯಕ್ಕೆ ಹೆಚ್ಚಿನ ಮಹತ್ವ
ಬೆಳುವಾಯಿ ಕೆಸರುಗದ್ದೆ ಮುಕ್ತಾನಂದ ಪ್ರೌಢಶಾಲೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಸ್ಫೂರ್ತಿ ಕಲಾ ಸಂಭ್ರಮ’ ಸಂಪೂರ್ಣ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ವೇದಿಕೆಯಾಯಿತು. ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹೆಗ್ಡೆ ಮುಂದಾಳತ್ವದಲ್ಲಿ, ಮಳಿಗೆದಾರರಿಗೆ ಹಾಗೂ ವರ್ತಕರಿಗೆ ಪರಿಸರಸ್ನೇಹಿ ವಸ್ತುಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಸ್ವಚ್ಛತೆಗೆ ಮಾದರಿ ಸ್ಫೂರ್ತಿ

ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಊರುಗಳ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಕಳೆದ 9 ವರ್ಷಗಳಿಂದ ಉಚಿತ ಶಿಕ್ಷಣ ನೀಡುತ್ತಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ ಹಾಗೂ ತರಬೇತಿ ಸಂಸ್ಥೆ ಕಳೆದ 7 ವರ್ಷಗಳಿಂದ ಪರಿಸರಸ್ನೇಹಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಸಂಸ್ಥೆಯಲ್ಲಿ ನಡೆಯುವ ಸಣ್ಣಪುಟ್ಟ ಚಟುವಟಿಕೆ, ಕಾರ್ಯಕ್ರಮಗಳಿಂದ ಹಿಡಿದು, ವಾರ್ಷಿಕೋತ್ಸವ, ಕಲಾಸಂಭ್ರಮದಂತಹ ದೊಡ್ಡಮಟ್ಟದ ಕಾರ್ಯಕ್ರಮಗಳಲ್ಲೂ ಶೂನ್ಯ ತ್ಯಾಜ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ಆಯೋಜಕರು ವರ್ತಕರಿಗೆ ಆವರಣದಲ್ಲಿ ಅಂಗಡಿಗೆ ಅವಕಾಶ ನೀಡುವ ಮೊದಲೇ ಶೂನ್ಯ ತ್ಯಾಜ್ಯದ ಸೂಚನೆ ನೀಡಿದ್ದರು. ಆವರಣವಾಗಲಿ, ಸಾರ್ವಜನಿಕ ರಸ್ತೆಯಲ್ಲಿಯಾಗಲಿ ಎಲ್ಲೂ ಕಸ ಕಾಣಿಸಿಕೊಳ್ಳಬಾರದೆನ್ನುವ ದೃಷ್ಟಿಯಿಂದ ಅಲ್ಲಲ್ಲಿ ಕಸ ತುಂಬಿಸಲು ಗೋಣಿ ಚೀಲ ಇರಿಸಲಾಗಿತ್ತು. ಅದರೊಂದಿಗೆ ಸೂಚನಾಫಲಕ ಅಳವಡಿಸಲಾಗಿತ್ತು.

ಪ್ಲಾಸ್ಟಿಕ್‌ಗೆ ಪರ್ಯಾಯ

ಸ್ಫೂರ್ತಿ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಅವರ ತಂಡ ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ನಮ್ಮ ಯೋಜನೆಗೆ ಹೆಚ್ಚಿನ ಬಲ ನೀಡಿದೆ. ವರ್ತಕರಿಂದಲೂ ಅದ್ಭುತ ಸ್ಪಂದನೆ ದೊರೆತಿದೆ.

ಪರಿಸರ ಸ್ನೇಹಿ ವಿಧಾನದಲ್ಲಿ ವ್ಯಾಪಾರ ಮಾಡುವುದು ನಮಗೂ ಖುಷಿ ನೀಡಿದೆ. ಗ್ರಾಹಕರು ಕೂಡ ಈ ಬದಲಾವಣೆಯನ್ನು ಮೆಚ್ಚಿಕೊಂಡಿದ್ದಾರೆ.

ನಮ್ಮ ಸಂಸ್ಥೆ ಪ್ರತಿ ಹಂತದಲ್ಲೂ ಶೂನ್ಯತ್ಯಾಜ್ಯ, ಪರಿಸರಸ್ನೇಹಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇಡೀ ದಿನ ಹಾಗೂ ರಾತ್ರಿ ನಡೆದ ಕಲಾಸಂಭ್ರಮದಲ್ಲಿ ನೂರಾರು ಮಂದಿ ಸೇರಿದರೂ ಎಲ್ಲೂ ಕಸ, ತ್ಯಾಜ್ಯ ಕಾಣಲಿಲ್ಲ. ಊಟ-ಉಪಹಾರ ನೀಡುವಲ್ಲಿಯೂ ಪರಿಸರಸ್ನೇಹಿ ವಿಧಾನವನ್ನೇ ಅನುಸರಿಸಿದ್ದೇವೆ.