ಕಡಬ: ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಕ್ಕರೆ ಪೆಟ್ರೋಲ್ ಪಂಪ್ ಬಳಿ ಶನಿವಾರ ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊಡಿಂಬಾಳ ಒರುಂತಿ ನಿವಾಸಿ ಮಹಮ್ಮದ್ ರಫೀಕ್ ಅವರ ಪುತ್ರ ತಮೀಮ್ (26) ಮೃತಪಟ್ಟಿದ್ದು, ಟೆಂಪೋ ಚಾಲಕ ಖಲೀಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಹಣ್ಣುಗಳನ್ನು ತುಂಬಿಸಿಕೊಂಡು ಕಡಬಕ್ಕೆ ತೆರಳುತ್ತಿದ್ದ ಟೆಂಪೋಗೆ ಆಲಂಕಾರಿನಿಂದ ವೇಗವಾಗಿ ಬಂದ ನೆಕ್ಸಾನ್ ಇವಿ ಕಾರು ಡಿಕ್ಕಿ ಹೊಡೆದಿದೆ. ಮತ್ತೊಂದು ವಾಹನವನ್ನು ಓವರ್ಟೇಕ್ ವಾಡುವಾಗ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಡಿಕ್ಕಿಯ ರಭಸಕ್ಕೆ ಟೆಂಪೋ ನಜ್ಜುಗುಜ್ಜಾಗಿದ್ದು, ಗ್ಯಾಸ್ ಕಟ್ಟರ್ ಬಳಸಿ ಅದರೊಳಗೆ ಸಿಲುಕಿದ್ದವರನ್ನು ಹೊರತೆಗೆಯಲಾಯಿತು. ಆದರೆ ಅಷ್ಟರಲ್ಲಾಗಲೇ ತಮೀಮ್ ಮೃತಪಟ್ಟಿದ್ದರು. ಖಲೀಲ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಮ್ಮದ್ ರಫೀಕ್ ದಂಪತಿಯ ಏಕೈಕ ಪುತ್ರನಾದ ತಮೀಮ್ ನ.19ರಂದು ಉದ್ಯೋಗಕ್ಕಾಗಿ ದುಬೈಗೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಕಾರು ರಾಮಕುಂಜ ಗ್ರಾಮದ ಕುಂಡಾಜೆ ನಿವಾಸಿಗೆ ಸೇರಿದ್ದಾಗಿ ತಿಳಿದುಬಂದಿದೆ. ಎನ್.ಎ.ಅಬೂಬಕ್ಕರ್ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.