MISSING 
ದಕ್ಷಿಣ ಕನ್ನಡ

ಮೈಸೂರಿಂದ ಬಸ್ಸಿನಲ್ಲಿ ಎಡನೀರಿಗೆ ಆಗಮಿಸುತ್ತಿದ್ದ ಯುವತಿ ನಾಪತ್ತೆ

ಮೈಸೂರಿನಿಂದ ಬಸ್ಸಿನಲ್ಲಿ ಎಡನೀರಿಗೆ ವಾಪಸಾಗುತ್ತಿದ್ದ ಮೈಸೂರು ನಿವಾಸಿ ಯುವತಿ ನಾಪತ್ತೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ಮೈಸೂರಿನಿಂದ ಬಸ್ಸಿನಲ್ಲಿ ಎಡನೀರಿಗೆ ವಾಪಸಾಗುತ್ತಿದ್ದ ಮೈಸೂರು ನಿವಾಸಿ ಯುವತಿ ನಾಪತ್ತೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮೈಸೂರು ಹಣಗೋಡು ಹೋಬಳಿ ಹರಿಣಹಳ್ಳಿ ನಿವಾಸಿ ಹಾಗೂ ಪಾಡಿ ಗ್ರಾಮದ ಎಡನೀರಿನ ಕ್ವಾರ್ಟರ್ಸ್‌ನ ನಿವಾಸಿ ದಿ. ಮಂಜುನಾಥ ಎಂಬುವರ ಪುತ್ರಿ ನಿರ್ಮಲಾ(18) ನಾಪತ್ತೆಯಾದ ಯುವತಿ. ಈ ಬಗ್ಗೆ ನಿರ್ಮಲಾಳ ಅಜ್ಜ ಶರವಣ ಎಂಬುವರು ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಎಡನೀರಿನಿಂದ ಇತ್ತೀಚೆಗೆ ಮೈಸೂರಿಗೆ ತೆರಳಿದ್ದ ನಿರ್ಮಲಾ ಅಲ್ಲಿಂದ ಸೆ.27ರಂದು ಮಧ್ಯಾಹ್ನ 2.30ಕ್ಕೆ ಬಸ್ಸನ್ನೇರಿದ್ದು, ಆದರೆ ಆಕೆ ಎಡನೀರಿಗೆ ತಲುಪದೆ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಪ್ರಾಪ್ತರಿಗೆ ಸ್ಕೂಟರ್ ನೀಡಿದ್ದ ಮೂವರು ತಾಯಂದಿರ ಮೇಲೆ ಕೇಸು

ಕಾಸರಗೋಡು: ಅಪ್ರಾಪ್ತರು ಚಲಾಯಿಸುತ್ತಿದ್ದ ಸ್ಕೂಟರ್ ವಶಪಡಿಸಿಕೊಂಡಿರುವ ಬೇಕಲ ಹಾಗೂ ಮೇಲ್ಪರಂಬ ಠಾಣೆ ಪೊಲೀಸರು ಸ್ಕೂಟರ್ ಚಲಾಯಿಸಲು ನೀಡಿದ ಬಾಲಕರ ತಾಯಂದಿರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಮೇಲ್ಪರಂಬ ಠಾಣೆ ಎಸ್‌ಐ ಟಿ.ಅಖಿಲ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೆಂಡಿಚ್ಚಾಲಿನಲ್ಲಿ 15ರ ಹರೆಯದ ವಿದ್ಯಾರ್ಥಿಯೊಬ್ಬ ಸ್ಕೂಟರ್ ಚಲಾಯಿಸುತ್ತಿರುವುದು ಪತ್ತೆಯಾಗಿದ್ದು, ಬಾಲಕನ ತಾಯಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬೇಕಲ ಠಾಣೆ ಎಸ್‌ಐ ಯು.ರೋಹಿತ್ ನೇತೃತ್ವದ ಪೊಲೀಸರ ತಂಡ ತಿರುವಾಕ್ಕೋಳಿ ಮಸೀದಿ ಸನಿಹ ವಾಹನ ತಪಾಸಣೆ ಮಧ್ಯೆ 17ರ ಹರೆಯದ ಬಾಲಕರಿಬ್ಬರು ಚಲಾಯಿಸುತ್ತಿದ್ದ ಸ್ಕೂಟರ್ ವಶಪಡಿಸಿಕೊಂಡು ಬಾಲಕರ ತಾಯಂದಿರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಎರಡೂ ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.