ಆತ್ಮಹತ್ಯೆಗೈದ ನವ್ಯಾ 
ದಕ್ಷಿಣ ಕನ್ನಡ

ನದಿಗೆ ಜಿಗಿದು ಯುವತಿ ಆತ್ಮಹತ್ಯೆ

ವಿಜಯವಾಣಿ ಸುದ್ದಿಜಾಲ ಗುರುಪುರ
ಇಲ್ಲಿನ ಹೊಸ ಸೇತುವೆ ಬಳಿ ಸೋಮವಾರ ಮಧ್ಯಾಹ್ನ 12.15ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವತಿಯರ ಪೈಕಿ ಒಬ್ಬಾಕೆ ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನವ್ಯಾ(21) ಆತ್ಮಹತ್ಯೆಗೈದವಳು. ಆಕೆ ಹಾಗೂ ಸ್ನೇಹಿತೆ ಕವನಾ(21) ಗುರುಪುರದಲ್ಲಿ ಬಸ್‌ನಿಂದ ಇಳಿದು ಹೊಸ ಸೇತುವೆಯತ್ತ ತೆರಳಿದ್ದರು. ಸೇತುವೆ ತಲುಪಿದಾಗ ನವ್ಯಾ ಬಾಟಲಿಯಲ್ಲಿದ್ದ ನೀರು ಕೊಡುವಂತೆ ಕೇಳಿದ್ದಳು. ಕವನಾ ಬ್ಯಾಗ್‌ನಿಂದ ಬಾಟಲಿ ತೆಗೆದು ಮುಚ್ಚಳ ತೆಗೆಯುತ್ತಿದ್ದಂತೆ ನವ್ಯಾ ಏಕಾಏಕಿ ನದಿಗೆ ಜಿಗಿದಿದ್ದಾಳೆ. ಆಕೆಯನ್ನು ಹಿಡಿಯಲು ಯತ್ನಿಸಿದ ಕವನಾಳ ಕೈಗೆ ತರಚು ಗಾಯವಾಗಿದೆ.
ನದಿಗೆ ಹಾರಿದ್ದ ನವ್ಯಾ ನೀರಿನಲ್ಲಿ ಮುಳುಗಿದ್ದಳು. ಸ್ಥಳೀಯರು ಕೂಡಲೇ ದೋಣಿ ಮೂಲಕ ಕಾರ್ಯಾಚರಣೆ ನಡೆಸಿದರೂ ಫಲಕಾರಿಯಾಗಲಿಲ್ಲ. ಸಂಜೆ ವೇಳೆಗೆ ಅಗ್ನಿಶಾಮಕದಳದ ಸಿಬ್ಬಂದಿ ಶವ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಜತೆಗಿದ್ದ ಯುವತಿಗೆ ಥಳಿತ

ನದಿಗೆ ಜಿಗಿದಾಕೆಯ ಜತೆಗಿದ್ದ ಮತ್ತೊಬ್ಬ ಯುವತಿಯೇ ಆಕೆಯನ್ನು ತಳ್ಳಿದ್ದಾಳೆ ಎಂದು ಸಮೀಪದಲ್ಲಿದ್ದ ಇಬ್ಬರು ಕವನಾಳಿಗೆ ಥಳಿಸಿದ್ದಾರೆ ಎನ್ನಲಾಗಿದೆ. ನವ್ಯಾ ಎಲ್ಲಿಗೆ ಹೋಗುವುದೆಂದು ನನಗೆ ಹೇಳಿರಲಿಲ್ಲ ಎಂದು ಕವನಾ ತಿಳಿಸಿದ್ದಾಳೆ. ಆಘಾತಕ್ಕೊಳಗಾದ ಆಕೆಯನ್ನು ಪಕ್ಕದ ಮನೆಗೆ ಕರೆತಂದು ಉಪಚರಿಸಿದ್ದು, ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿದರು. ಇದೇ ವೇಳೆ ಮೂಡುಬಿದಿರೆಗೆ ತೆರಳುತ್ತಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹಾಗೂ ಬಿಜೆಪಿ ನಾಯಕ ಸಚಿನ್ ಅಡಪ ಕವನಾಳಿಗೆ ಸಾಂತ್ವನ ಹೇಳಿದರು. ಬಳಿಕ ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ.


ಪ್ರೇಮ ವೈಫಲ್ಯ ಕಾರಣ?

ನವ್ಯಾ ಮೂಡುಬಿದಿರೆ ನಿವಾಸಿಯಾಗಿದ್ದು, ಅಲ್ಲಿನ ಜುವೆಲ್ಲರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನಿಡ್ಡೋಡಿ ಬಂಗೇರಪದವು ನಿವಾಸಿ ಕವನಾ ಮೂಡುಬಿದಿರೆಯ ಗಡಿಯಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಪ್ರೇಮವೈಫಲ್ಯದಿಂದ ನೊಂದಿದ್ದ ನವ್ಯಾ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
*ಫೋಟೋ: ಎಂಎನ್‌ಜಿ- ನವ್ಯಾ ಸೂಸೈಡ್