ಮಂಗಳೂರು: ಲಕ್ಷಾಂತರ ರೂ. ವೇತನ ಇರುವ ಕೆಲಸ ತೆಗೆಸಿಕೊಡುತ್ತೇವೆ ಎಂದು ನಂಬಿಸಿ ಅರ್ಮೇನಿಯಾ ದೇಶಕ್ಕೆ ಕರೆಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಯುವಕರು ಬಜಪೆ ಮತ್ತು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
ಮಂಜುನಾಥ ನಾಯ್ಕ, ಉಮೇಶ್ ಬಿ.ಸಿ.ರೋಡ್ ಮತ್ತು ಗಗನ್ ಯೆಯ್ಯಡಿ ದೂರು ನೀಡಿರುವ ಸಂತ್ರಸ್ತರು. ಡಿ.4ರಂದು ಅರ್ಮೇನಿಯಾದಿಂದ ವಾಪಾಸು ಬಂದಿರುವ ಅವರು, ವಂಚನೆ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪರಿಚಿತ ರಾಕೇಶ್ ರೈ ಎಂಬಾತ ಅರ್ಮೇನಿಯಾದಲ್ಲಿ ಉದ್ಯೋಗ ಇದೆ, ಅಮೆರಿಕನ್ ಕಂಪೆನಿಯಲ್ಲಿ ಕೆಲಸ ತೆಗೆಸಿಕೊಡುತ್ತೇನೆ ಎಂದು ನಂಬಿಸಿದ್ದ. ಅದರಂತೆ 2.25ಲಕ್ಷ ರೂ. ಪಡೆದು ವಿಸಿಟಿಂಗ್ ವೀಸ ಕಳುಹಿಸಿದ್ದ. ಅ.8ರಂದು ಅಲ್ಲಿಗೆ ಹೋಗಿದ್ದು, ಅಲ್ಲಿ ರಾಕೇಶ್ ಜತೆಗೆ ಇತರ ಇಬ್ಬರು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬಾಡಿಗೆ ಕೊಠಡಿಯೊಂದನ್ನು ಮಾಡಿಕೊಟ್ಟಿದ್ದರು. ಆದರೆ ವಾರ ಕಳೆದರೂ ಕೆಲಸ ಮಾಡಿಸಿ ಕೊಟ್ಟಿರಲಿಲ್ಲ. ಕರೆಸಿಕೊಂಡು ವ್ಯಕ್ತಿಗಳು ನಮ್ಮ ಬಗ್ಗೆ ಯಾವುದೇ ಕಾಳಜಿ ತೋರಿಸದ ಕಾರಣ ಕೆಲಸ ಕೊಡದೆ ಕೊನೆಗೆ ದುಡ್ಡಿಗಾಗಿ ಅಲ್ಲಿ ಕೂಲಿ ಕೆಲಸಕ್ಕೆ ಸೇರಬೇಕಾಯಿತು.
ಅದು ಭಾರತಕ್ಕಿಂತಲೂ ಬಡ ರಾಷ್ಟ್ರ ಎಂದು ಮತ್ತೆ ತಿಳಿದು ಬಂತು. ಕೊನೆಗೆ ನಾವು ಮೂವರು ಹೇಗೂ ತಪ್ಪಿಸಿಕೊಂಡು ಅಲ್ಲಿಂದ ಬಂದಿದ್ದೇವೆ. ಇಲ್ಲಿ ಇದ್ದ ಒಳ್ಳೆಯ ಕೆಲಸವನ್ನು ಬಿಟ್ಟು ಲಕ್ಷಾಂತರ ರೂ. ಸಂಬಳ ದೊರೆಯುತ್ತದೆ ಎನ್ನುವ ಆಸೆಯಿಂದ ಅಲ್ಲಿಗೆ ಹೋಗಿದ್ದೆವು. ವಿಸಿಟಿಂಗ್ ವಿಸಾದಲ್ಲಿ 21 ದಿನ ಮಾತ್ರ ವಾಸ್ತವ್ಯಕ್ಕೆ ಅವಕಾಶವಿದ್ದು, ನಾವು ಹೆಚ್ಚುವರಿಯಾಗಿ ಉಳಿದ ದಂಡ ಹಾಕಿದ್ದು, ದಂಡ ಕಟ್ಟಲು ಹಣವಿಲ್ಲದೆ, ಮತ್ತೆ ವಾಪಾಸು ಬರುವುದಿಲ್ಲ ಎಂದು ಹೇಳಿ ಬರೆದುಕೊಟ್ಟು ಬಂದಿದ್ದೇವೆ. ಅವರು ಬ್ಯಾನ್ ಮಾಡಿದ್ದರಿಂದ ಬೇರೆ ದೇಶಗಳಿಗೆ ಹೋಗಲೂ ಸಮಸ್ಯೆ ಆಗಬಹುದು ಎಂದು ಮಂಜುನಾಥ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.