ಉಳ್ಳಾಲ: ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ದ ಬಾಗಲಕೋಟೆ ಮೂಲದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ, ಪ್ರಸ್ತುತ ಉಳ್ಳಾಲದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದ ಗೂಡಸಾಬ್ ಯಾನೆ ಆಶಿಫ್(23) ಬಂಧಿತ ಆರೋಪಿ.
ಉಳ್ಳಾಲ ತಾಲೂಕು ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಕುಟುಂಬದ ಅಪ್ರಾಪ್ತ ಸಹೋದರಿಯರಿಬ್ಬರು ಮಂಗಳವಾರ ಬೆಳಗ್ಗೆ ಶಾಲಾ ವಾಹನದಲ್ಲಿ ಶಾಲೆಗೆ ಹೋಗಿದ್ದರು. ಆದರೆ ಹಿರಿಯವಳು ಶಾಲೆಗೆ ಗೈರಾಗಿದ್ದರಿಂದ ಶಿಕ್ಷಕಿ ಪಾಲಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಗೂಡಸಾಬ್ ಯಾನೆ ಆಶಿಫ್ ಶಾಲೆಯ ಬಳಿ ಹಿಂಬಾಲಿಸಿ ಬಂದು ತನ್ನನ್ನು ಮಾತನಾಡಿಸುತ್ತಿದ್ದ ಎಂದು ಬಾಲಕಿ ಮೊದಲೇ ತಾಯಿಗೆ ಮಾಹಿತಿ ನೀಡಿದ್ದರಿಂದ ಅನುಮಾನಗೊಂಡ ಬಾಲಕಿಯ ಪಾಲಕರು ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದರು. ಅಲ್ಲದೆ ಮಗಳ ಬಳಿ ಮಾತನಾಡದಂತೆ ಗೂಡಸಾಬ್ಗೆ ಹಿಂದೆಯೇ ಎಚ್ಚರಿಕೆ ನೀಡಿದ್ದಾಗಿಯೂ ಮಾಹಿತಿ ನೀಡಿದ್ದರು.
ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿ ಉಳ್ಳಾಲ ಸಮೀಪ ಸೋಮೇಶ್ವರದಲ್ಲಿ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ.