ಉಡುಪಿಯಲ್ಲಿ ಸುದ್ದಿಗೋಷ್ಠಿ 
ದಕ್ಷಿಣ ಕನ್ನಡ

ಉಡುಪಿ ಸೆಂಟರ್ ಆಫ್ ಎಕ್ಸಲೆನ್ಸ್ ವಿಸ್ತರಿಸಿದ ಎಕ್ಸ್‌ಫಿನೊ

ಉಡುಪಿ : ಎಕ್ಸ್‌ಫಿನೊ, ಪ್ರಮುಖ ಸ್ಪೆಷಲಿಸ್ಟ್ ಸ್ಟಾಫಿಂಗ್ ಸಂಸ್ಥೆ, ಉಡುಪಿಯಲ್ಲಿನ ತನ್ನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ ಸಂಸ್ಥೆ ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ.
ಜಿಸಿಸಿಗಳಿಂದ ಹೆಚ್ಚುತ್ತಿರುವ ಪ್ರತಿಭಾ ಬೇಡಿಕೆ ಹಾಗೂ ಸೆಪ್ಟೆಂಬರ್ 2024ರಲ್ಲಿ ಪ್ರದೇಶದ ಮೊದಲ ನೇಮಕಾತಿ-ಕೇಂದ್ರಿತ ಕೇಂದ್ರವಾಗಿ ಪ್ರಾರಂಭವಾದ ಉಡುಪಿ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನ ಯಶಸ್ವಿ ಆರಂಭದ ಫಲವಾಗಿ ಈ ವೇಗದ ವಿಸ್ತರಣೆ ಸಾಧ್ಯವಾಗಿದೆ. ವಿಸ್ತರಿಸಲಾದ 250 ಆಸನಗಳ ಸೌಲಭ್ಯವು ಜಿಸಿಸಿ, ಭಾರತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಉನ್ನತ ಗುಣಮಟ್ಟದ ಸ್ಪೆಷಲಿಸ್ಟ್ ನೇಮಕಾತಿ ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ.
“ನಮ್ಮ ಉಡುಪಿ ಸಿಒಇ ನಾಯಕತ್ವ, ಹೊಸ ಪ್ರತಿಭೆಗಳ ಪ್ರವೇಶ ಮತ್ತು ಉನ್ನತ ಗುಣಮಟ್ಟದ ಮೂಲಸೌಕರ್ಯಗಳ ವಿಶಿಷ್ಟ ಸಂಯೋಜನೆಯನ್ನು ಒದಗಿಸಿದೆ. ಇದು ನಮ್ಮ ದೃಷ್ಟಿಕೋನದೊಂದಿಗೆ ಹೊಂದಿಕೊಂಡು ಶ್ರೇಷ್ಠತೆಯ ಸಂಸ್ಕೃತಿಯನ್ನು ರೂಪಿಸಿದೆ. ಇದರ ಫಲವಾಗಿ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಆತ್ಮವಿಶ್ವಾಸ ನಮಗೆ ದೊರೆತಿದೆ,” ಎಂದು ಎಕ್ಸ್‌ಫಿನೊದ ಸಹ-ಸಂಸ್ಥಾಪಕ ಅನಿಲ್ ಕುಮಾರ್ ಎತನೂರ್ ಹೇಳಿದರು.
ಆರಂಭದಿಂದಲೂ, ಉಡುಪಿ ಸಿಒಇ 10ಕ್ಕೂ ಹೆಚ್ಚು ಜಿಸಿಸಿಗಳನ್ನು ಒಳಗೊಂಡಂತೆ 50ಕ್ಕೂ ಹೆಚ್ಚು ಗ್ರಾಹಕ ಸಂಸ್ಥೆ (ಕ್ಲೈಂಟ್‌)ಗಳಿಗೆ ಬೆಂಬಲ ನೀಡಿದ್ದು, ನೇರ ಹಾಗೂ ಒಪ್ಪಂದ ಆಧಾರಿತ ನೇಮಕಾತಿಯ ಮೂಲಕ ಐಟಿ ಮತ್ತು ಐಟಿಯೇತರ ಕ್ಷೇತ್ರಗಳಲ್ಲಿ 1,050ಕ್ಕೂ ಹೆಚ್ಚು ನಿಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಲ್ಲಿ 2024ರಲ್ಲಿ 104 ನಿಯೋಜನೆಗಳು ಹಾಗೂ 2025ರಲ್ಲಿ 951 ನಿಯೋಜನೆಗಳು ಸೇರಿವೆ. ಪ್ರಸ್ತುತ ಸಿಒಇ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ಪ್ರತಿಭಾ ಮಾರುಕಟ್ಟೆಗಳಿಗೆ ಸೇವೆ ನೀಡುತ್ತಿದ್ದು, ದುಬೈ ಸೇರಿದಂತೆ ಅಂತರರಾಷ್ಟ್ರೀಯ ಸ್ಥಳಗಳಿಗೂ ನೇಮಕಾತಿ ಆದೇಶಗಳನ್ನು ಕಾರ್ಯಗತಗೊಳಿಸುತ್ತಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಜೊತೆಗಿನ ಸಹಭಾಗಿತ್ವದಲ್ಲಿ ಎಕ್ಸ್‌ಫಿನೊ ಸೆಪ್ಟೆಂಬರ್ 2025ರಲ್ಲಿ ಬಿಡುಗಡೆ ಮಾಡಿದ ಸಿಲಿಕಾನ್ ಬೀಚ್ ಕೌಶಲ್ಯ ವರದಿಯ ಸಂಶೋಧನೆಗಳೊಂದಿಗೆ ಈ ವಿಸ್ತರಣೆ ನಿಕಟವಾಗಿ ಹೊಂದಿಕೆಯಾಗುತ್ತದೆ.
ಈ ವರದಿ ಉಡುಪಿ–ಮಂಗಳೂರು ಪ್ರದೇಶವನ್ನು 3,10,000ಕ್ಕೂ ಹೆಚ್ಚು ಸಾಮರ್ಥ್ಯದ ಪ್ರತಿಭಾ ಸಮೂಹವಾಗಿ ಗುರುತಿಸಿದ್ದು, 2,40,000ಕ್ಕೂ ಹೆಚ್ಚು ವೃತ್ತಿಪರರನ್ನು ಒಳಗೊಂಡ ಸಕ್ರಿಯ ಕಾರ್ಯಪಡೆಯು ಇಲ್ಲಿ ಲಭ್ಯವಿದೆ ಎಂದು ತಿಳಿಸಿದೆ. ಈ ಮೂಲಕ ಈ ಪ್ರದೇಶವನ್ನು ಕರ್ನಾಟಕದ ಅತ್ಯಂತ ಕಡಿಮೆ ಉಪಯೋಗಗೊಂಡ ಪ್ರತಿಭಾ ಕಾರಿಡಾರ್‌ಗಳಲ್ಲಿ ಒಂದಾಗಿದೆ ಎಂದು ವರದಿ ಎತ್ತಿ ತೋರಿಸಿದೆ.
ವರದಿಯ ಪ್ರಕಾರ, ಈ ಪ್ರದೇಶದ ಅನುಭವಿ ವೈಟ್-ಕಾಲರ್ ಪ್ರತಿಭೆಯ ಸುಮಾರು 75% ಮಂಗಳೂರು ಮತ್ತು ಉಡುಪಿಯಲ್ಲಿ ಕೇಂದ್ರೀಕೃತವಾಗಿದ್ದು, ಐಟಿ/ಐಟಿಇಎಸ್, ಬಿಎಫ್‌ಎಸ್‌ಐ, ಪ್ರೋಗ್ರಾಮಿಂಗ್, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ ಹಾಗೂ ವ್ಯವಹಾರ ಕೌಶಲ್ಯಗಳಲ್ಲಿ ಬಲವಾದ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಆದರೆ ಪ್ರಸ್ತುತ ಸುಮಾರು 90,000 ವೃತ್ತಿಪರರು ಮಾತ್ರ ಒಂದು ವರ್ಷಕ್ಕಿಂತ ಹೆಚ್ಚಿನ ಕೆಲಸದ ಅನುಭವವನ್ನು ಹೊಂದಿರುವುದು, ರಚನಾತ್ಮಕ ಕೌಶಲ್ಯ ಅಭಿವೃದ್ಧಿ, ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ಉದ್ಯಮ-ನೇತೃತ್ವದ ಸಾಮರ್ಥ್ಯ ನಿರ್ಮಾಣದ ಅಗತ್ಯವನ್ನು ಸ್ಪಷ್ಟಪಡಿಸುತ್ತದೆ. ಇವೇ ಎಕ್ಸ್‌ಫಿನೊದ ಸಿಒಇ ಮಾದರಿಯ ಪ್ರಮುಖ ಕೇಂದ್ರಬಿಂದುಗಳಾಗಿವೆ.
“ಉಡುಪಿಯಲ್ಲಿನ ಎಕ್ಸ್‌ಫಿನೊ ಸಿಒಇ ಕೇವಲ ಅತ್ಯಾಧುನಿಕ ಸೌಲಭ್ಯವಲ್ಲ; ಇದು ಸ್ಥಳೀಯ ಹಾಗು ಉಭಯ ಜಿಲ್ಲೆಯ (ಉಡುಪಿ ಮತ್ತು ದಕ್ಷಿಣ ಕನ್ನಡ) ಪ್ರತಿಭಾ ವೃತ್ತಿಪರರನ್ನೊಳಗೊಂಡ ಕೇಂದ್ರವಾಗಿದೆ. ಹೊಸಬರು ಮತ್ತು ಲ್ಯಾಟರಲ್ ನೇಮಕಾತಿಗಳಲ್ಲಿ ನಮ್ಮ ತಂಡದ ಸುಮಾರು 80% ಮಂದಿ ನೇಮಕಾತಿ ಹಿನ್ನೆಲೆ ಇಲ್ಲದವರಾಗಿದ್ದು, ಅವರ ಸಾಮರ್ಥ್ಯವನ್ನು ಗುರುತಿಸಿ ವ್ಯವಸ್ಥಿತವಾಗಿ ಉದ್ಯಮ ತಜ್ಞರನ್ನಾಗಿ ರೂಪಿಸಿರುವುದಕ್ಕೆ ನಮಗೆ ಹೆಮ್ಮೆ ಇದೆ.
ಇದಲ್ಲದೆ, ನಮ್ಮ ಉಡುಪಿ ತಂಡವು 50%ಕ್ಕಿಂತ ಹೆಚ್ಚು ಮಹಿಳಾ ಕಾರ್ಯಪಡೆಯಿಂದ ನಡೆಸಲ್ಪಡುತ್ತಿದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ 100 ಉದ್ಯೋಗಿಗಳನ್ನು ಹೊಂದಿದ್ದು, ಈಗ 250 ಆಸನಗಳ ಸಾಮರ್ಥ್ಯಕ್ಕೆ ವಿಸ್ತರಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. 20 ಬಿಲಿಯನ್ ಡಾಲರ್ ಮೌಲ್ಯದ ಸಿಬ್ಬಂದಿ ಉದ್ಯಮ ಮಾರುಕಟ್ಟೆಯಲ್ಲಿ ಲಾಭದಾಯಕ ಹಾಗೂ ದೀರ್ಘಕಾಲೀನ ವೃತ್ತಿಜೀವನ ನಿರ್ಮಿಸಲು ನಾವು ಹೊಸ ಪೀಳಿಗೆಗೆ ಅನುವು ಮಾಡಿಕೊಡುತ್ತಿದ್ದೇವೆ” ಎಂದು ಉಡುಪಿಯಲ್ಲಿ ತಮ್ಮ ಶಾಲಾ ಶಿಕ್ಷಣ ಪಡೆದ ಎಕ್ಸ್‌ಫಿನೊದ ಸಹ-ಸಂಸ್ಥಾಪಕ ಕಮಲ್ ಕಾರಂತ್ ಐರೋಡಿ ಹೇಳಿದರು.
ಜಿಸಿಸಿಗಳು ಹೆಚ್ಚಾಗಿ ವಿತರಿತ ಕಾರ್ಯಾಚರಣೆ ಹಾಗೂ ಮಹಾನಗರೇತರ ಪ್ರತಿಭಾ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ, ಉಡುಪಿ–ಮಣಿಪಾಲ–ಮಂಗಳೂರು ಕಾರಿಡಾರ್, ಬೆಂಗಳೂರು ಸೇರಿದಂತೆ ಇತರ ಮಹಾನಗರಗಳಲ್ಲಿ ಸಾಂಪ್ರದಾಯಿಕವಾಗಿ ನೆಲೆಗೊಂಡಿರುವ ದೊಡ್ಡ ಪ್ರಮಾಣದ, ಗಡಿಯಾಚೆಗಿನ ನೇಮಕಾತಿ ಆದೇಶಗಳಿಗೆ ಪ್ರಮುಖ ಪರ್ಯಾಯವಾಗಿ ರೂಪುಗೊಳ್ಳುತ್ತಿದೆ.
ಎಕ್ಸ್‌ಫಿನೊದ ವಿಸ್ತರಿತ ಸಿಒಇ ನೇರ ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ, ಪ್ರದೇಶಕ್ಕೆ ರಾಷ್ಟ್ರೀಯ ಮತ್ತು ಜಾಗತಿಕ ಪ್ರತಿಭಾ ಒಳನೋಟಗಳನ್ನು ತಲುಪಿಸಲಿದೆ. ಇದರ ಮೂಲಕ ಉದ್ಯಮ–ಶೈಕ್ಷಣಿಕ ಸಹಯೋಗ ಮತ್ತಷ್ಟು ಗಟ್ಟಿಯಾಗುವುದರೊಂದಿಗೆ, ಬೆಂಗಳೂರನ್ನು ದಾಟಿದ ಕರ್ನಾಟಕದ ವಿಶಾಲ ಡಿಜಿಟಲ್ ಆರ್ಥಿಕ ದೃಷ್ಟಿಕೋನವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.