ಪದವು ಕುಲಶೇಖರದ ನಿರ್ಮಾಣ ಅಂತಿಮ ಹಂತದ ಕಾಮಗಾರಿಯನ್ನು ನಳಿನ್ ಕುಮಾರ್ ಕಟೀಲು, ವೇದವ್ಯಾಸ ಕಾಮತ್, ಭಾಸ್ಕರಚಂದ್ರ ಶೆಟ್ಟಿ, ಕಿಶೋರ್ ಕೊಟ್ಟಾರಿ ಮೊದಲಾದವರು ವೀಕ್ಷಿಸಿದರು. 
ದಕ್ಷಿಣ ಕನ್ನಡ

18ರಿಂದ 24 ಪದವು ಕುಲಶೇಖರ ಶ್ರೀ ಶನೈಶ್ಚರ ದೇವಳದ ಬ್ರಹ್ಮಕಲಶೋತ್ಸವ

ಮಂಗಳೂರು: ಪದವು ಕುಲಶೇಖರದಲ್ಲಿ ಹಿಂದೂ ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಎ.18ರಿಂದ 24ರವರೆಗೆ ಬಾಳಂಭಟ್ ಮನೆತನದ ವೇ.ಮೂ.ಎಂ.ಗಿರಿಧರ ಭಟ್ ಮತ್ತು ವೇ.ಮೂ.ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ನವಗ್ರಹ ಸಹಿತ ಶ್ರೀ ಶನೈಶ್ಚರ, ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗುವುದು. ಎ.18ರಂದು ಸಾಮೂಹಿಕ ಪ್ರಾರ್ಥನೆಯಿಂದ ಆರಂಭವಾಗಿ 108 ಕಾಯಿ ಗಣಯಾಗ, ರುದ್ರಯಾಗ, ಲಕ್ಷ್ಮೀನಾರಾಯಣ ಪ್ರಧಾನ ಹೋಮ ಎ.22ರವರೆಗೆ ನಡೆಯಲಿದೆ. ಎ.23ರಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ ಮತ್ತು ಶ್ರೀ ದೇವರಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕವು ನಡೆಯಲಿದೆ. ಎ.24 ರಂದು ಚಂಡಿಕಾಯಾಗ ಹಾಗೂ ಸಗ್ರಹ ಶನೈಶ್ಚರ ಮಹಾಯಾಗ ಸಂಪನ್ನಗೊಳ್ಳಲಿದೆ. ಪ್ರತಿದಿನ ವಿವಿಧ ಮಂಡಳಿಗಳಿಂದ ಭಜನೆ, ಅನ್ನಸಂತರ್ಪಣೆ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಇನ್ನೂ 20 ಸೆಂಟ್ಸ್ ಜಮೀನಿನ ಅವಶ್ಯಕತೆಯಿದ್ದು, ಭೂ ದಾನ ಯೋಜನೆಯ ಮೂಲಕ ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಮಂಗಳೂರು ನಗರದಲ್ಲಿ 13 ವಲಯ ಸಮಿತಿಗಳನ್ನು ಹಾಗೂ ಮಹೇಶ್ ಶೆಟ್ಟಿ ತೆಳ್ಳಾರ್ ಅವರ ಅಧ್ಯಕ್ಷತೆಯಲ್ಲಿ ಮುಂಬೈ ಸಮಿತಿಯನ್ನು ರಚಿಸಲಾಗಿದೆ ಎಂದರು.
ಎ.19 ರಂದು ಬೆಳಗ್ಗೆ 9 ಗಂಟೆಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನೂತನ ಶಿಲಾಬಿಂಬಗಳೊಂದಿಗೆ ದೇವಸ್ಥಾನದ ನಿತ್ಯೋಪಯೋಗಿ ಪರಿಕರಗಳು, ಬ್ರಹ್ಮಕಲಶಕ್ಕೆ ಬೇಕಾದ ಪರಿಕರಗಳು, ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಶಾಸಕ, ಸಮಿತಿ ಕಾರ್ಯಾಧ್ಯಕ್ಷ ಡಿ.ವೇದವ್ಯಾಸ ಕಾಮತ್ ಮಾತನಾಡಿ,ಎ.21ರಂದು ಶನಿದೇವರ ಮಹಾತ್ಮೆಯ ಪುಣ್ಯಕಥಾನಕವನ್ನು ಛಾಯಾನಂದನ’ ಯಕ್ಷಗಾನ ಬಯಲಾಟದ ಮೂಲಕ ಶ್ರೀ ಪಾವಂಜೆ ಮೇಳದವರು ಹಾಗೂ ಎ.23ರಂದು ಶ್ರೀ ಲಲಿತೆ ಕಲಾವಿದರಿಂದ ಶನಿ ಮಹಾತ್ಮೆ’ ತುಳು ಪೌರಾಣಿಕ ನಾಟಕ ಪ್ರದರ್ಶಿಸಲಿರುವರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
* ಹಿಂದೂ ಯುವಸೇನೆಯ ಸಮಾವೇಶ : ಶಿವಾಜಿ ಮಂಟಪದಲ್ಲಿ ಪ್ರತಿದಿನ ಸಂಜೆ ಧರ್ಮಸಭೆ ನಡೆಯಲಿದ್ದು, ಎ.19 ರಂದು ಹಿಂದೂ ಯುವಸೇನೆಯ ಸಮಾವೇಶವು ಜರುಗಲಿದೆ ಎಂದವರು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ, ಶ್ರೀ ಶನೈಶ್ಚರ ಪೂಜಾ ಸಮಿತಿ ಅಧ್ಯಕ್ಷ ರಾಮಚಂದ್ರ ಚೌಟ, ಮಾತೃ ಮಂಡಳಿ ಅಧ್ಯಕ್ಷೆ ವಿಜಯ ಅರುಣ್, ಪ್ರಮುಖರಾದ ಮೋನಪ್ಪ ಭಂಡಾರಿ, ಉಮೇಶ್ ರೈ ಪದವು ಮೇಗಿನಮನೆ, ಶಕೀಲ ಕಾವ, ಕಾವ್ಯ ನಟರಾಜ್, ಕಿಶೋರ್ ಕೊಟ್ಟಾರಿ ಇದ್ದರು.