ಕಾಸರಗೋಡು: ಗಾರ್ಮೆಂಟ್ ಹಾಗೂ ಬಟ್ಟೆ ವ್ಯಾಪಾರದ ಹೆಸರಿನಲ್ಲಿ ಹಲವರಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿ ಪರಾರಿಯಾಗಿದ್ದ ಮಹಿಳೆಯನ್ನು ಕಾಞಂಗಾಡ್ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ.
ಕಾಞಂಗಾಡಿನ ನೆಲ್ಲಿಕ್ಕಾಟ್ನಲ್ಲಿ ವಾಸಿಸುತ್ತಿದ್ದ ನಫೀಸಾ(62)ಬಂಧಿತೆ. ಕೊಲ್ಲಂನಲ್ಲಿರುವ ಮನೆಯೊಂದರಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದ ಈಕೆಯನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಹೊಸದುರ್ಗ ನ್ಯಾಯಾಲಯದ ಜ್ಯುಡೀಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ನಫೀಸಾ ವಿರುದ್ಧ 10ಕ್ಕೂ ಹೆಚ್ಚು ಅಮಾನ್ಯ ಚೆಕ್ ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿತ್ತು. ಬಟ್ಟೆ ವ್ಯಾಪಾರದಲ್ಲಿ ಹೂಡಿಕೆ ಹಾಗೂ ಶೇರು ನೀಡುವ ಆಮಿಷವೊಡ್ಡಿ ವಿವಿಧ ವ್ಯಕ್ತಿಗಳಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿ ಪರಾರಿಯಾಗಿದ್ದರು.