ಪುತ್ತೂರು ತಾಲೂಕಿನ ಪೆರ್ನಾಜೆಯ ಪ್ರಗತಿಪರ ಕೃಷಿಕ ಕುಮಾರ್ ಪೆರ್ನಾಜೆ ಅವರ ತೋಟದಲ್ಲಿ ಕಾಡಾನೆಗಳು ಕೃಷಿ ಹಾನಿ ಮಾಡಿವೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪ್ರದೇಶಕ್ಕೆ ಮಂಗಳವಾರ ರಾತ್ರಿ ಲಗ್ಗೆಯಿಟ್ಟು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿ ಮರುದಿನ ಮುಂಜಾನೆ ವೇಳೆ ಮಳಿ ಕಡೆಗೆ ತೆರಳಿದ್ದ ಕಾಡಾನೆಗಳು, ಬುಧವಾರ ರಾತ್ರಿ ವೇಳೆ ಮತ್ತೆ ಪೆರ್ನಾಜೆ ಭಾಗಕ್ಕೆ ಮರಳಿ ಬಂದು ಉಪಟಳ ಮುಂದುವರಿಸಿದೆ.
ಅರಣ್ಯ ಇಲಾಖೆಯವರು ಬುಧವಾರ ರಾತ್ರಿ ವೇಳೆ ಪೆರ್ನಾಜೆ ವ್ಯಾಪ್ತಿಗೆ ಬಂದು ಕಾಡಾನೆಗಳನ್ನು ಓಡಿಸಲು ಸೈರನ್ ಮೊಳಗಿಸಿ ಹೋದ ಬೆನ್ನಲ್ಲೇ ಕಾಡಾನೆಗಳು ಬಂದು ಕೃಷಿ ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.
ಪೆರ್ನಾಜೆ ಕೃಷಿಕರಾದ ರಾಘವೇಂದ್ರ ಭಟ್, ಗೋಪಾಲಕೃಷ್ಣ ಕಲ್ಲೂರಾಯ, ಕುಮಾರ್ ಪೆರ್ನಾಜೆ ಅವರ ಕೃಷಿ ತೋಟಗಳಿಗೆ ಮಂಗಳವಾರ ರಾತ್ರಿ ಕಾಡಾನೆಗಳು ಲಗ್ಗೆಯಿಟ್ಟು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿತ್ತು. ಬಳಿಕ ಅಲ್ಲಿಂದ ಮಳಿ ಕಡೆಗೆ ತೆರಳಿದ್ದ ಕಾಡಾನೆಗಳು ಮಳಿ ನಾರಾಯಣ ಆಚಾರ್ಯ ಅವರ ತೋಟದಲ್ಲಿ 8 ತೆಂಗಿನಮರಗಳನ್ನು ಮುರಿದು ನಾಶ ಮಾಡಿತ್ತು. ಬುಧವಾರ ರಾತ್ರಿ ಮತ್ತೆ ಪೆರ್ನಾಜೆ ಪ್ರದೇಶಕ್ಕೆ ಮರಳಿ ಬಂದ ಕಾಡಾನೆಗಳು ಕುಮಾರ್ ಪೆರ್ನಾಜೆ ಮತ್ತು ರಾಘವೇಂದ್ರ ಭಟ್ ಅವರ ಕೃಷಿ ತೋಟಕ್ಕೆ ಲಗ್ಗೆಯಿಟ್ಟು ಇನ್ನಷ್ಟು ಕೃಷಿ ಹಾನಿ ಮಾಡಿದೆ.
ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ಪೆರ್ನಾಜೆ ಭಾಗದಲ್ಲಿ ಕಾಡಾನೆ ಹಾವಳಿ ತಡೆಗಾಗಿ ಸೋಲಾರ್ ಬೇಲಿ ಅಳವಡಿಸಿದ್ದರೂ ಸರಿಯಾದ ನಿರ್ವಹಣಾ ವ್ಯವಸ್ಥೆ ಇಲ್ಲದ ಕಾರಣ ಅದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.