ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದ ಕಾಡಾನೆ.
- ನೆಟ್‌ವರ್ಕ್ ಇಲ್ಲದೆ ಮಾಹಿತಿ ಕಷ್ಟ
- ಕುದುರೆಮುಖ, ಮೂಡಿಗೆರೆ ವಲಯದಿಂದ ಬರುವ ಗಜಪಡೆ
- ಪ್ರಯಾಣಿಕರಿಗೆ ಆತಂಕ
ಚಾರ್ಮಾಡಿ ತಪ್ಪಲಲ್ಲಿ ಕಾಡಾನೆಗಳ ಕಾಟ ನಿರಂತರವಾಗಿದ್ದು ಈ ಭಾಗದ ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಗಾಗ ಕಾಡಾನೆ ಕಂಡು ಬರುತ್ತಿರುವುದು ಇಲ್ಲಿಂದ ಪ್ರಯಾಣಿಸುವವರ ಆತಂಕ ಹೆಚ್ಚಿಸುತ್ತಿದೆ. ಕಳೆದ 15 ದಿನಗಳಲ್ಲಿ ನಾಲ್ಕೈದು ಬಾರಿ ಕಾಡಾನೆ ರಸ್ತೆಯಲ್ಲಿ ಕಂಡುಬಂದಿದ್ದು ಅನೇಕ ಹೊತ್ತು ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಘಾಟಿ ಪ್ರದೇಶದಲ್ಲಿ ಒಂಟಿ ಸಲಗದ ಉಪಟಳ ಇದ್ದರೆ ತಾಲೂಕಿನ ಇತರ ಭಾಗಗಳಲ್ಲಿ ಆನೆಗಳ ಹಿಂಡು ಕೃಷಿ ತೋಟಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಚಾರ್ಮಾಡಿ, ನೆರಿಯ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ನಿಡ್ಲೆ, ಶಿಶಿಲ, ಶಿಬಾಜೆ, ಬೆಳಾಲು, ಬಂದಾರು ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತಗೊಂಡಿದೆ. ಈ ಭಾಗದ ಅರಣ್ಯ ಪ್ರದೇಶಗಳಿಂದ ತೋಟಗಳಿಗೆ ಇಳಿಯುವ ಕಾಡಾನೆಗಳು ಕೃಷಿ ಹಾನಿ ಮಾಡುತ್ತಿವೆ.
ತಾಲೂಕಿನಲ್ಲಿ 2020-21ರಲ್ಲಿ 22, 2021 -22ರಲ್ಲಿ 25, 2022-23ರಲ್ಲಿ 29, 2023-24ರಲ್ಲಿ 29, 2023-24ರಲ್ಲಿ 51, 2024-25ರಲ್ಲಿ 52, 2025-26ರಲ್ಲಿ 98 ಕಡೆ ಆನೆಗಳು ಕೃಷಿ ಹಾನಿ ನಡೆಸಿದ ಪ್ರಕರಣಗಳು ಅರಣ್ಯ ಇಲಾಖೆಯಲ್ಲಿ ದಾಖಲಾಗಿವೆ. ಇಷ್ಟು ಕೃಷಿಕರು ಆನೆಯಿಂದ ಕೃಷಿ ಹಾನಿಯಾದ ಬಗ್ಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಸಣ್ಣಪುಟ್ಟ ಹಾನಿ ಬಗ್ಗೆ ಹಲವರು ಅರ್ಜಿ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಕಾಡಿನಲ್ಲಿ ಆಹಾರ ಲಭ್ಯತೆ ಇದ್ದರೂ ಕಾಡ್ಗಿಚ್ಚು ಇತ್ಯಾದಿಗಳಿಂದ ಆನೆಗಳು ನಾಡಿನತ್ತ ಇಳಿಯುತ್ತಿವೆ. ಕುದುರೆಮುಖ ರಾಷ್ಟೀಯ ಉದ್ಯಾನವನ, ಚಾರ್ಮಾಡಿ ಅರಣ್ಯ ಪ್ರದೇಶ, ಮೂಡಿಗೆರೆ ಅರಣ್ಯ ವಲಯ ಒಂದಕ್ಕೊಂದು ಹತ್ತಿರವಿದ್ದು ಆ ಭಾಗಗಳ ಮೂಲಕ ಕಾಡಾನೆಗಳು ಸಮೀಪದ ಗ್ರಾಮಗಳಿಗೆ ಬರುತ್ತಿವೆ. ಪ್ರಸ್ತುತ ನದಿಗಳು ಬತ್ತಿದ್ದು ಕೆಲವು ಕಡೆ ನೀರಿನ ಸಮಸ್ಯೆ ತಲೆದೋರಿದೆ. ನೀರನ್ನು ಹುಡುಕಿ ಬರುವ ಕಾಡಾನೆಗಳು ಜನವಸತಿ ಪ್ರದೇಶದತ್ತ ಇಳಿಯುತ್ತಿದ್ದು, ರಸ್ತೆಗಳಲ್ಲೂ ಕಂಡು ಬರುತ್ತಿವೆ.
ನೆಟ್‌ವರ್ಕ್ ಇಲ್ಲದೆ ಮಾಹಿತಿ ಕಷ್ಟ
ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಆನೆಗಳಿಗೆ ಸಾಕಷ್ಟು ನೀರು, ಆಹಾರ ಸಿಗುತ್ತಿದೆ. ಈ ಕಾರಣದಿಂದ ಆನೆಗಳು ಹೆಚ್ಚಾಗಿ ಘಾಟಿ ಪ್ರದೇಶದಲ್ಲಿ ತಿರುಗಾಟ ನಡೆಸುತ್ತವೆ. ಕಳೆದ ಕೆಲವು ದಿನಗಳಿಂದ ಒಂಟಿ ಸಲಗ ಘಾಟಿ ಪ್ರದೇಶದಲ್ಲೆ ಸುತ್ತಾಡುತ್ತಿದೆ. ರಸ್ತೆಯ ಅಲ್ಲಲ್ಲಿ ಕಂಡು ಬರುವ ಈ ಕಾಡಾನೆ ಜನರಲ್ಲಿ ಭಯವನ್ನು ಹುಟ್ಟಿಸುತ್ತಿದೆ. ಘಾಟಿ ಪ್ರದೇಶದಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಮುಂಜಾಗ್ರತೆ ಅಗತ್ಯವಾಗಿದೆ. ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ತಕ್ಷಣ ಮಾಹಿತಿ ನೀಡಲು ಆಗುತ್ತಿಲ್ಲ. ಸೆಲ್ಫಿ ಹುಚ್ಚು, ಕಾಡಾನೆಗಳನ್ನು ಓಡಿಸುವ ಪ್ರಯತ್ನ ಇತ್ಯಾದಿಗಳಿಂದ ಜನಸಾಮಾನ್ಯರು ಕೆಲವೊಮ್ಮೆ ಅಪಾಯಗಳಿಗೂ ಸಿಲುಕುವ ಸಾಧ್ಯತೆ ಇದೆ.
ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲಿ ಕೂಡ ಕಾಡಾನೆಗಳು ಕಂಡು ಬರುತ್ತಿವೆ. ಪಟಾಕಿ ಸದ್ದಿಗೂ ಬೆದರದ ಕಾಡಾನೆಗಳು, ಜನ ವಾಸ್ತವ್ಯ ಪ್ರದೇಶಗಳತ್ತ ಬರುತ್ತಿವೆ. ನಿರ್ವಹಣೆ ಇಲ್ಲದ ಆನೆ ಕಂದಕಗಳ ಮೂಲಕ ಆನೆಗಳು ಎಲ್ಲೆಂದರಲ್ಲಿ ನುಗ್ಗಿ ಬರುತ್ತಿವೆ. ಕೆಲವೆಡೆ ಸೋಲಾರ್ ಬೇಲಿ ಇದ್ದರೂ ನಿರ್ವಹಣೆ ಇಲ್ಲದೆ ಆನೆಗಳು ನಾಡಿನ ಕಡೆ ಬರಲು ಸುಲಭವಾಗುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲುವ ಒಂಟಿ ಸಲಗ ಇದೆ. ತಾಲೂಕಿನ ಒಂದಲ್ಲ ಒಂದು ಕಡೆ ಪ್ರತಿದಿನ ಎಂಬಂತೆ ಕಾಡಾನೆಗಳು ಕೃಷಿಹಾನಿ ಉಂಟುಮಾಡುತ್ತಿವೆ. ಕಳೆದ ಕೆಲವು ತಿಂಗಳುಗಳ ಹಿಂದೆ ಕೊಕ್ಕಡದ ಪ್ರದೇಶವೊಂದರಲ್ಲಿ ಕಾಡಾನೆ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿತ್ತು.
ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವುದು.
ಘಾಟಿಯಲ್ಲಿ ಠಿಕಾಣಿ
ಸೋಮವಾರ ಹಗಲು ಹೊತ್ತು ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನ ಸಮೀಪ ಕಂಡು ಬಂದಿದ್ದ ಆನೆ ಅಲ್ಲಿನ ಆಸುಪಾಸಿನಲ್ಲಿ ಠಿಕಾಣಿ ಹೂಡಿದ್ದು, ಸೋಮವಾರ ರಾತ್ರಿ, ಮಂಗಳವಾರ ಬೆಳಗ್ಗೆ ವಾಹನ ಸವಾರರಿಗೆ ಎದುರಾಯಿತು. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ಚಾರ್ಮಾಡಿ ಘಾಟಿಯಲ್ಲಿ ರಸ್ತೆಯಲ್ಲಿ ಪದೇಪದೆ ಕಾಡಾನೆ ಕಂಡು ಬರುತ್ತಿರುವುದರಿಂದ ಪ್ರಯಾಣಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಇದಲ್ಲದೆ ಸೋಮವಾರ ರಾತ್ರಿ ಕಡಿರುದ್ಯಾವರ ಗ್ರಾಮದಲ್ಲೂ ಕಾಡಾನೆಗಳ ಹಿಂಡು ಕಂಡು ಬಂದಿದೆ.
ಚಾರ್ಮಾಡಿ ಘಾಟಿ ಹಾಗೂ ಅಗತ್ಯ ಪ್ರದೇಶದಲ್ಲಿ ಇಲಾಖೆಯಿಂದ ನಿರಂತರ ಗಸ್ತುಕಾರ್ಯ ನಡೆಯುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದ ಕಾಡಾನೆಯನ್ನು ಅರಣ್ಯ ಪ್ರದೇಶಕ್ಕೆ ಓಡಿಸಲಾಗಿದೆ. ಅಗತ್ಯಬಿದ್ದಲ್ಲಿ ಆನೆ ಕಾರ್ಯಪಡೆಯನ್ನು ಕರೆಯಿಸಲಾಗುವುದು.
— ತ್ಯಾಗರಾಜ್ ಆರ್‌ಎಫ್‌ಒ, ಅರಣ್ಯ ಇಲಾಖೆ, ಬೆಳ್ತಂಗಡಿ