ಬಂದಾರು ಗ್ರಾಮದ ಕರ್ಲೋಡಿಯಲ್ಲಿ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವುದು. 
ದಕ್ಷಿಣ ಕನ್ನಡ

ಬಂದಾರು, ಮುಂಡಾಜೆಯಲ್ಲಿ ಕಾಡಾನೆ ಕಾಟ

ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾಮದ ಕರ್ಲೋಡಿ ಹಾಗೂ ಮುಂಡಾಜೆ ಗ್ರಾಮದ ಕುಳೆಂಜಿರೋಡಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ.

ಕಾಡಾನೆಗಳು ತಡರಾತ್ರಿ ಗ್ರಾಮಗಳ ನಾನಾ ಭಾಗಗಳಲ್ಲಿ ಸಂಚರಿಸಿದ್ದು, ಕೃಷಿಕರ ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ, ತೆಂಗು ಸೇರಿದಂತೆ ಕೃಷಿ ಬೆಳೆಗಳನ್ನು ತುಳಿದು ಹಾಗೂ ತಿಂದು ಹಾನಿಗೊಳಿಸಿವೆ.
ಕುಳೆಂಜಿರೋಡಿಯಲ್ಲಿ ಮಹೇಂದ್ರ ಪರಾಂಜಪೆ ಎಂಬುವರ ತೋಟದಲ್ಲಿ ಕಳೆದ ವಾರ ಕೂಡ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿ ಉಂಟುಮಾಡಿದ್ದವು. ಶನಿವಾರ ತಡರಾತ್ರಿ ಮತ್ತೆ ತೋಟಕ್ಕೆ ಲಗ್ಗೆ ಇಟ್ಟಿವೆ. ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವುದು, ಮನೆಗಳ ಹತ್ತಿರದವರೆಗೂ ಸಂಚಾರ ನಡೆಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.