ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ತಿರುವೈಲು ವಾರ್ಡ್‌ನಲ್ಲಿ ನೀರಿನ ಸಮಸ್ಯೆ

ಟ್ಯಾಂಕರ್ ನೀರು ಖರೀದಿ

ಧನಂಜಯ ಗುರುಪುರ

ಮಂಗಳೂರು ಮಹಾನಗರ ಪಾಲಿಕೆಯ 20ನೇ ತಿರುವೈಲು ವಾರ್ಡ್‌ನ ಎವರ್ ಶೈನ್ ಗಾರ್ಡನ್ ಸಹಿತ ಕೆಲವು ವಸತಿ ಬಡಾವಣೆಗಳಲ್ಲಿ ಬೇಸಿಗೆ ಶುರುವಾಗುವುದಕ್ಕೂ ಮುಂಚೆಯೇ ಕುಡಿಯುವ ನೀರಿನ ಅಭಾವ ಕಂಡು ಬಂದಿದ್ದು, ಸ್ಥಳೀಯರು ಟ್ಯಾಂಕರ್ ನೀರು ಅವಲಂಬಿಸುತ್ತಿದ್ದಾರೆ.

ತಿರುವೈಲು ಸರ್ಕಾರಿ ಶಾಲೆ ಮತ್ತು ಹಳೆಯ ಚೆಕ್‌ಪೋಸ್ಟ್‌ನ ಎದುರು ಭಾಗದ ಕಟ್ಟಡ ನಿವಾಸಿಗರು ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಪ್ರತಿ 2 ದಿನಕ್ಕೊಂದು ಬಾರಿ 500 ರೂ. ನೀಡಿ ಟ್ಯಾಂಕರ್ ನೀರು ಖರೀದಿ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಸ್ಥಳೀಯ ಅಮೃತನಗರದಲ್ಲಿದ್ದರೂ, ಎವರ್ ಶೈನ್ ಗಾರ್ಡನ್ ನಿವಾಸಿಗರು ಮಾತ್ರ ನೀರಿಗಾಗಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ.

ಅಮೃತನಗರದಲ್ಲೂ 2 ದಿನಕ್ಕೊಂದು ಬಾರಿ ನೀರು ಬರುತ್ತದೆ. ಸದ್ಯ ಈ ನೀರು ಸಾಕಾಗುತ್ತದೆ. ಇಲ್ಲಿ ಇದುವರೆಗೆ ಕುಡಿಯುವ ನೀರಿನ ವಿಷಯದಲ್ಲಿ ದೊಡ್ಡಮಟ್ಟದ ಸಮಸ್ಯೆ ಎದುರಾಗಿಲ್ಲ. ಆದರೆ ಕೆಲವೊಂದು ಬಾರಿ ಈ ಪ್ರದೇಶದಲ್ಲೂ ಕಡಿಮೆ ನೀರು ಪೂರೈಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಟ್ಯಾಂಕರ್ ನೀರು ಬಳಕೆ ಮಾಡಬೇಕಾಗುತ್ತದೆ ಎಂದು ಅಮೃತನಗರದ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಇನ್ನೋರ್ವ ನಿವಾಸಿ ಹೇಳುವಂತೆ, ಕೆಲವು ಕಟ್ಟಡಗಳಲ್ಲಿ ಕುಡಿಯುವ ನೀರಿನ ಒಂದು ಮೀಟರ್‌ಗೆ ಒಂದಕ್ಕಿಂತ ಹೆಚ್ಚು ಸಂಪರ್ಕಗಳಿದ್ದಲ್ಲಿ ನೀರಿನ ಸಮಸ್ಯೆ ಕಂಡುಬರುವುದು ಸಹಜ. ಪ್ರತ್ಯೇಕ ನೀರಿನ ಮೀಟರ್ ಅಳವಡಿಸಿದಲ್ಲಿ ಬಹುತೇಕ ಈ ಸಮಸ್ಯೆ ನಿಯಂತ್ರಿಸಬಹುದು. ತಿರುವೈಲು ವಾರ್ಡ್‌ನ ಒಂದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದು ವಾಸ್ತವ. ಅಮೃತನಗರದಲ್ಲೂ ನೀರಿನ ಸಮಸ್ಯೆ ಕಂಡುಬಂದ ದಿನಗಳಲ್ಲಿ ಒಂದಿಬ್ಬರು ಟ್ಯಾಂಕರ್ ನೀರು ಖರೀದಿಸಿದ್ದಾರೆ.

ಪರಿಶೀಲಿಸಲು ಆಗ್ರಹ

ನೀರು ಸಪೂರವಾಗಿ ಬರುವಲ್ಲಿ ಪೈಪ್ ಒಡೆದು ಹೋಗಿರುವ ಸಾಧ್ಯತೆಗಳಿವೆ. ಆ ಬಗ್ಗೆ ಸ್ಥಳೀಯ ವಾಟರ್‌ಮನ್ ಪರಿಶೀಲನೆ ನಡೆಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ತಿರುವೈಲು ವಾರ್ಡ್‌ನ ಕುಡಿಯುವ ನೀರಿನ ಸಮಸ್ಯೆಯತ್ತ ಸಂಬಂಧಿತ ಮನಪಾ ವಿಭಾಗ ದೃಷ್ಟಿಹರಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ನಾವು ಕಳೆದ ಒಂದು ತಿಂಗಳಿಂದ 2 ದಿನಕ್ಕೊಂದು ಬಾರಿ ಟ್ಯಾಂಕರ್ ನೀರು ತರಿಸುತ್ತಿದ್ದೇವೆ. ನೀರಿನ ಸಮಸ್ಯೆ ಬಗ್ಗೆ ನಿಕಟಪೂರ್ವ ಕಾರ್ಪೊರೇಟರ್ ಅವರಲ್ಲಿ ತಿಳಿಸಿದ್ದೇವೆ. ಆದರೆ ಪರಿಸ್ಥಿತಿ ಬದಲಾಗಿಲ್ಲ. ನೀರಿನ ಸಮಸ್ಯೆ ಬಗ್ಗೆ ಮನಪಾ ಅಧಿಕಾರಿಗಳಿಗೆ ದೂರು ನೀಡಲಿದ್ದೇವೆ. ಈಗಲೇ ಪರಿಸ್ಥಿತಿ ಹೀಗಾದರೆ ಮುಂದಿನ ಬೇಸಿಗೆಯಲ್ಲಿ ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ.
ಪ್ರಮೀಳಾ, ಎವರ್ ಶೈನ್ ಗಾರ್ಡನ್ ನಿವಾಸಿ