ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲೀಕರ ಸಂಘ ಪ್ರಾರಂಭಗೊಂಡು ೮ ವರ್ಷಗಳಾಗಿದ್ದು, ಪ್ರತಿ ವರ್ಷ ಒಂದು ತಾಲೂಕಿನಲ್ಲಿ ಮಾಲೀಕರು ಹಾಗೂ ಕಾರ್ಮಿಕರು ಜತೆಯಾಗಿ ಕುಟುಂಬ ಮಿಲನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಟ್ಲ ಶಾಮಿಯಾನ ಮಾಲೀಕರ ಸಂಘದ ದಶಮಾನೋತ್ಸವ ಹಿನ್ನೆಲೆಯಲ್ಲಿ ಅ.6ರಂದು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ವಾರ್ಷಿಕ ಮಿಲನೋತ್ಸವ- ೨೦೨೬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸದಸ್ಯತ್ವ ಹೊಂದಿದವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸುಳ್ಯ ಹಾಗೂ ಪುತ್ತೂರು ತಾಲೂಕಿನವರೂ ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ ೯ರಿಂದ ಸಂಜೆ ೬ರತನಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಘಟಕಗಳ ಸಹಕಾರದ ಮೂಲಕ ಬಂಟ್ವಾಳದಲ್ಲಿ ಸಂಘಕ್ಕೆ ಜಮೀನು ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದರು.
ಜಿಲ್ಲಾ ಕೋಶಾಽಕಾರಿ ನಿಶಿತ್ ಪೂಜಾರಿ ಮಾತನಾಡಿ, ವಿಟ್ಲ ಸಂಘಕ್ಕೆ ಹತ್ತು ವರ್ಷ ತುಂಬಿರುವುದರಿಂದ ಈ ವರ್ಷದ ಕಾರ್ಯಕ್ರಮ ವಿಟ್ಲದ ಆತಿಥ್ಯದಲ್ಲಿ ನಡೆಯಲಿದೆ. ೨ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳು ಒಟ್ಟೊಟ್ಟಿಗೆ ನಡೆಯಲಿವೆ ಎಂದರು.
ವಿಟ್ಲ ಘಟಕದ ಗೌರವಾಧ್ಯಕ್ಷ ಚಂದ್ರಹಾಸ ಸುವರ್ಣ, ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಂಕುಡೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಬರೆ, ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಬಂಗಾರು ಅರಸರು ಉದ್ಘಾಟಿಸುವರು. ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ, ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ನಡೆಯಲಿದೆ ಎಂದು ವಿಟ್ಲ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಂಕುಡೆ ತಿಳಿಸಿದರು.