ಉಕ್ಕುಡ-ಬೈರಿಕಟ್ಟೆ ರಸ್ತೆಯ ತಿರುವಿನಲ್ಲಿ ಭಾರಿ ಗಾತ್ರದ ಲಾರಿಗಳ ಸಂಚಾರದಿಂದ ಗುಂಡಿಯಾಗಿ ಕೆಸರು ತುಂಬಿರುವುದು. 
ದಕ್ಷಿಣ ಕನ್ನಡ

ತೇಪೆ ಮಾಡಲಾಗದಷ್ಟೂ ಹದಗೆಟ್ಟ ರಸ್ತೆ VITTAL

ಪ್ರಮುಖ ಮುಖ್ಯಾಂಶಗಳು

  • ಉಕ್ಕುಡ- ಬೈರಿಕಟ್ಟೆಯಲ್ಲಿ ಸಂಚಾರ ಸಂಕಷ್ಟ
  • ಮರುನಿರ್ಮಾಣವೇ ಪರಿಹಾರ
ವಿಟ್ಲ: ಹಲವಾರು ವರ್ಷಗಳ ಹಿಂದೆ ಡಾಂಬರೀಕರಣಗೊಂಡಿದ್ದ ಉಕ್ಕುಡ- ಬೈರಿಕಟ್ಟೆ ರಸ್ತೆ ಭಾರಿ ಗಾತ್ರದ ಲಾರಿಗಳು, ಸರಕು ಸಾಗಾಟ ವಾಹನಗಳ ನಿರಂತರ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದೆ. ಪರಿಣಾಮ ಲಘು ವಾಹನಗಳ ಸಂಚಾರಕ್ಕೂ ರಸ್ತೆ ಅಯೋಗ್ಯವಾಗಿದೆ. ಮಳೆ ನಿಂತ ಬಳಿಕ ತೇಪೆ ಕಾರ್ಯ ನಡೆಸದಷ್ಟೂ ಆಗದ ಸ್ಥಿತಿಗೆ ರಸ್ತೆ ತಲುಪಿದ್ದು ಸರ್ಕಾರ ಹೆಚ್ಚಿನ ಅನುದಾನ ನೀಡಿ ರಸ್ತೆಯನ್ನು ಮರುನಿರ್ಮಾಣ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಮಳೆಗಾಲದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಬೇಕಾದ ಸಾಧ್ಯತೆಯಿದೆ.
ಕನ್ಯಾನ, ಕರೋಪಾಡಿ ಭಾಗದಿಂದ ೧೬ರಿಂದ ೨೦ ಚಕ್ರಗಳ ಬೃಹತ್ ಲಾರಿಗಳಲ್ಲಿ ಗಣಿ ಉತ್ಪನ್ನಗಳನ್ನು ಆಂಧ್ರಪ್ರದೇಶ ಸೇರಿ ವಿವಿಧ ಕಡೆಗೆ ಸಾಗಿಸಲಾಗುತ್ತದೆ. ಈ ಲಾರಿಗಳು ನಿಗದಿತ ಭಾರಕ್ಕಿಂತ ಹೆಚ್ಚು ಸಾಗಾಟ ಮಾಡುವುದು ರಸ್ತೆ ಹಾನಿಗೆ ಮುಖ್ಯ ಕಾರಣವಾಗಿದೆ. ಸಂಪೂರ್ಣ ತಿರುವುಗಳಿಂದಲೇ ಕೂಡಿದ ರಸ್ತೆಯಲ್ಲಿ ಭಾರ ಹೇರಿಕೊಂಡು ಹೋಗುವ ಲಾರಿಗಳ ಚಕ್ರ ಉಜ್ಜಿಕೊಂಡು ಹೋಗುವುದರಿಂದ ಡಾಂಬರು ಕಿತ್ತು ಹೋಗುತ್ತಿದೆ.
ಅಗತ್ಯ ವ್ಯವಸ್ಥೆ ಅನಿವಾರ್ಯ: ರಸ್ತೆಯ ಅಗತ್ಯ ಭಾಗಗಳಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಸೂಕ್ತ ಚರಂಡಿ ವ್ಯವಸ್ಥೆಯೊಂದಿಗೆ ಪೂರ್ತಿ ರಸ್ತೆಯನ್ನು ಮರುನಿರ್ಮಿಸಬೇಕಾದ ಅಗತ್ಯವಿದೆ. ಪಾದಚಾರಿಗಳು ನಡೆದಾಡಲು -ಟ್‌ಪಾತ್ ನಿರ್ಮಿಸಬೇಕಾಗಿದೆ. ರಸ್ತೆಯ ಅಂಚುಗಳನ್ನು ವಿವಿಧ ಯೋಜನೆಗೆ ಅಗೆದು ಹಾನಿಗೊಳಿಸಿದ್ದರಿಂದ ಮುಂದಿನ ಕಾಮಗಾರಿಯಲ್ಲಿ ಅಗಲೀಕರಣಗೊಳಿಸುವ ಅನಿವಾರ್ಯತೆಯೂ ಇದೆ ಎಂಬ ಅಭಿಪ್ರಾಯ ಲೋಕೋಪಯೋಗಿ ಇಲಾಖೆಯದ್ದಾಗಿದೆ.
ರಸ್ತೆ ಕುಸಿತ ಆತಂಕ: ಕೆಲವು ಸಮಯದಿಂದ ಕೇರಳ ಸಂಪರ್ಕಿಸುವ ಉಕ್ಕುಡ-ಬೈರಿಕಟ್ಟೆ ರಸ್ತೆಯಲ್ಲಿ ವಾಹನಗಳ ಸಂಚಾರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ರಸ್ತೆ ಮೇಲಿನ ಒತ್ತಡ ಹೆಚ್ಚಾಗಿದೆ. ಒಂದು ಭಾಗದಲ್ಲಿ ಪ್ರಪಾತವಿದ್ದು, ಇನ್ನೊಂದು ಭಾಗದಲ್ಲಿ ಅರಣ್ಯ ಇಲಾಖೆಯ ಭೂಮಿಯಿದೆ. ಇದರಿಂದ ರಸ್ತೆ ಕುಸಿತವಾಗುವ ಆತಂಕವೂ ಇದೆ. ಸದ್ಯ ಉಂಟಾಗಿರುವ ಗುಂಡಿಗಳಿಂದ ಇಲಾಖೆಗೆ ರಸ್ತೆಯನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಹನ ಸವಾರರು ಹಲವು ವರ್ಷಗಳಿಂದ ದುರಸ್ತಿಗೆ ಆಗ್ರಹಿಸುತ್ತಲೇ ಇದ್ದಾರೆ.

ಹೊಸದಾಗಿ ನಿರ್ಮಿಸಲು ಮನವಿ

ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಗುಂಡಿಗಳಿಗೆ ಲೋಡ್‌ಗಟ್ಟಲೆ ಕಲ್ಲು, ಕ್ರಷರ್ ಡಸ್ಟ್ ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೆ ದುರಸ್ತಿಗೆ ಮುಂದಾದಲ್ಲಿ ಮುಂದಿನ ಮಳೆಗಾಲದಲ್ಲಿ ಇದಕ್ಕಿಂತ ದೊಡ್ಡ ಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆಯನ್ನು ಮರುನಿರ್ಮಾಣ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಇಲಾಖೆಯೂ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಅಗತ್ಯವಾಗಿ ತುರ್ತು ಕ್ರಮವಾಗಬೇಕಾಗಿದೆ.

ಪೊಲೀಸ್ ಇಲಾಖೆಯಿಂದಲೂ ಪತ್ರ

ಉಕ್ಕುಡ-ಬೈರಿಕಟ್ಟೆ ನಡುವಿನ ರಸ್ತೆ ಹದಗೆಡಲು ಕಾರಣ ಕೇಳಿ ಲೋಕೋಪಯೋಗಿ ಇಲಾಖೆಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಸೂಕ್ತ ಮಾನದಂಡವನ್ನು ಬಳಸದೆ ನಿಗದಿಗಿಂತ ಅಽಕ ಭಾರಗಳನ್ನು ಹೇರಿಕೊಂಡು ಹೋಗುವ ವಾಹನಗಳ ಸಂಚಾರದಿಂದ ರಸ್ತೆ ಹದಗೆಟ್ಟಿದೆ ಎಂಬ ಕಾರಣವನ್ನು ಇಲಾಖೆ ನೀಡಿದೆ. ಇದರ ಜತೆಗೆ ಕುಡಿಯುವ ನೀರಿನ ಯೋಜನೆಗಾಗಿ ರಸ್ತೆಯ ಅಂಚುಗಳನ್ನು ತುಂಡರಿಸಿರುವು ಕೂಡ ಸಮಸ್ಯೆಯಾಗಿದೆ. ಚರಂಡಿ ನೀಡಲೂ ಸ್ಥಳಾವಕಾಶವಿಲ್ಲದೆ ನೀರು ರಸ್ತೆಯಲ್ಲಿ ಹರಿಯುವುದು ಇನ್ನೊಂದು ಕಾರಣ ಎಂದು ಹೇಳಿದೆ.
"

ಭಾರಿ ಲಾರಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ತಿರುವುಗಳಲ್ಲಿ ಸಣ್ಣ ವಾಹನ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸ್ಥಳೀಯರು ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಲಾರಿಗಳನ್ನು ತಡೆದು ಪ್ರತಿಭಟಿಸುವ ಅನಿವಾರ್ಯತೆ ಎದುರಾಗಲಿದೆ.