ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮಾತನಾಡಿದರು. ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ ವಿ. ಇದ್ದರು. 
ದಕ್ಷಿಣ ಕನ್ನಡ

ಅನುಷ್ಠಾನವಾಗದ ಸಭಾ ನಿರ್ಣಯ VITTAL

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆಡಳಿತ ಮತ್ತು ವಿಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ಸೋಮವಾರ ಸಾಮಾನ್ಯ ಸಭೆ ನಡೆಯಿತು. ಮೋರಿಯೊಳಗಿನ ಪೈಪ್ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ವಾರ್ಡ್ ಸದಸ್ಯರ ಗಮನಕ್ಕೆ ತರದೆ ಕಾಮಗಾರಿ ನಡೆಸಲಾಗುತ್ತಿದೆ, ರಸ್ತೆ ಬದಿಯ ಗಿಡ ಗಂಟಿಗಳ ತೆರವಿಗೆ ಟೆಂಡರ್ ಅನ್ನು ಕನಿಷ್ಠ ಇಬ್ಬರಿಗಾದರೂ ನೀಡಬೇಕು, ಅಂಗವಿಕಲರಿಗೆ ತಿಂಗಳಿಗೆ ಔಷಧಕ್ಕೆ ಹಣ ಬೇಕಾಗಿದ್ದು ವ್ಯವಸ್ಥೆ ಮಾಡಬೇಕು ಮತ್ತಿತರ ವಿಷಯಗಳ ಬಗ್ಗೆ ಸದಸ್ಯರು ಬೇಡಿಕೆ ಸಲ್ಲಿಸಿದರು.

ಅಕ್ರಮ ಕಟ್ಟಡ ತೆರವು, ರಸ್ತೆ ಒತ್ತುವರಿ: ಸದಸ್ಯ ಅರುಣ್ ವಿಟ್ಲ ಮಾತನಾಡಿ, ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಮೇಗಿನಪೇಟೆಯಲ್ಲಿ ರಸ್ತೆ ಬದಿಯಲ್ಲಿರುವ ಗುಜರಿ ರಾಶಿ ಹಾಗೂ ವಾಹನ ಪಾರ್ಕಿಂಗ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ತಕ್ಷಣ ತೆರವುಗೊಳಿಸಬೇಕು. ಅಲ್ಲದೆ ಕಾಸರಗೋಡು ರಸ್ತೆ, ಅಡ್ಡಬೀದಿ, ಕಲ್ಲಡ್ಕ ಮತ್ತು ಬೊಬ್ಬೆಕೇರಿ ರಸ್ತೆ ಬದಿಗಳಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಹೆಚ್ಚಾಗುತ್ತಿದ್ದು, ಒಂದು ಕೋಣೆಯ ಕಟ್ಟಡಕ್ಕೆ ಅನುಮತಿ ಪಡೆದು ಮೂರು ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.

ಸದಸ್ಯ ಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ ಮಾತನಾಡಿ, ಅನಽಕೃತ ಕಟ್ಟಡಗಳ ನಿರ್ಮಾಣಕ್ಕೆ ಅಧ್ಯಕ್ಷರು ಹಾಗೂ ಮುಖ್ಯಾಽಕಾರಿಗಳೇ ಹೊಣೆ. ಹಿಂದಿನ ಸಭೆಗಳ ನಿರ್ಣಯಗಳನ್ನು ಸರಿಯಾಗಿ ಜಾರಿಗೊಳಿಸಿದ್ದರೆ ಈ ರೀತಿ ಅಕ್ರಮ ಕಟ್ಟಡಗಳಿಗೆ ಅವಕಾಶವಾಗುತ್ತಿರಲಿಲ್ಲ ಎಂದರು.

ಪಂಚಾಯಿತಿ ನಿಧಿಯನ್ನು ಸದಸ್ಯರಿಗೆ ಸಮಾನವಾಗಿ ಹಂಚುವಿಕೆ, ಕುಡಿಯುವ ನೀರು ಸರಬರಾಜು ವಾಹನಗಳಿಗೆ ಗುತ್ತಿಗೆ, ರಸ್ತೆ ಹೊಂಡಗಳಿಗೆ ತೇಪೆ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಪ್ರಾಧ್ಯಾಪಕ ಡಾ.ರಾಜೇಶ್ ಬಿಜ್ಜಂಗಳ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ವಿಧಾನ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು.

ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ ವಿ., ಕಂದಾಯ ವಸೂಲಿಗಾರ ಚಂದ್ರಶೇಖರ ವರ್ಮ, ಆರೋಗ್ಯ ನಿರೀಕ್ಷಕ ರಾಮಚಂದ್ರ ಉಪಸ್ಥಿತರಿದ್ದರು.

ಅಂಗವಿಕಲರ ಸವಲತ್ತಿಗಾಗಿ ಮೂರು ಬಾರಿ ನೋಟಿಫಿಕೇಷನ್ ನೀಡಿದರೂ ಅರ್ಜಿಗಳು ಬಾರದಿದ್ದರೆ ಆಕ್ಷನ್ ಪ್ಲ್ಯಾನ್ ಬದಲಾವಣೆ ಮಾಡಬಹುದಾಗಿದೆ. ಘನತ್ಯಾಜ್ಯ ಬಗ್ಗೆ ಸ್ವಚ್ಛ ಸಂಕಲ್ಪ ಮಾಸ ಕಾರ್ಯಕ್ರಮ ಆಚರಿಸುವಂತೆ ಸರ್ಕಾರದ ಸುತ್ತೋಲೆ ಬಂದಿದೆ. ನಿವೇಶನಗಳನ್ನು ಬಿ ಖಾತೆಯಿಂದ ಎ ಖಾತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು ಸಾವಿರ ಚದರ ಅಡಿಯ ಭೂ ಪರಿವರ್ತನೆಯ ಅವಕಾಶವನ್ನು ಸ್ಥಳೀಯಾಡಳಿತಕ್ಕೆ ಒಂದು ವರ್ಷದವರೆಗೆ ನೀಡಲಾಗಿದೆ.
ಕರುಣಾಕರ ವಿ., ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ