ವಿಟ್ಲ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ನೀರು ಹರಿವಿಗೆ ಜಾಗವಿಲ್ಲದೆ ಸಂಚಾರಕ್ಕೆ ಸಮಸ್ಯೆಯಾಗಿರುವುದು.
- ವಿಟ್ಲ-ಮಂಗಳೂರು ರಸ್ತೆ ಕೆಸರುಮಯ
- ಪರ್ಯಾಯ ಮಾರ್ಗಗಳು ಕುಸಿಯುವ ಭೀತಿ
ವಿಟ್ಲ: ವಿಟ್ಲ-ಮಂಗಳೂರು ರಸ್ತೆಯು ಕೆಸರುಮಯವಾಗಿದ್ದು, ಪರ್ಯಾಯ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ. ಕಡೂರು-ಕಾಂಞಗಾಡು ಹೆದ್ದಾರಿಯ ವಿಟ್ಲ ಬೊಬ್ಬೆಕೇರಿಯಲ್ಲಿ ಜಾಗದ ತಕರಾರಿನಿಂದಾಗಿ ೧೩೫ ಮೀಟರ್ ರಸ್ತೆ ಅಭಿವೃದ್ಧಿ ಹಲವು ವರ್ಷಗಳಿಂದ ಬಾಕಿ ಉಳಿದಿತ್ತು. ಪ್ರಸ್ತುತ ಕಾಮಗಾರಿ ಆರಂಭವಾಗಿದ್ದರೂ ಸರಣಿ ವಿಘ್ನಗಳು ಎದುರಾಗುತ್ತಿವೆ. ರಸ್ತೆ ಮಧ್ಯದಲ್ಲಿದ್ದ ಮೋರಿ ಕುಸಿದು ನೀರು ರಸ್ತೆಯ ನಿಲ್ಲುತ್ತಿರುವುದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಾಹನಗಳ ಸಂಚಾರದಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂದು ಗುತ್ತಿಗೆದಾರರು ದೂರುತ್ತಿದ್ದಾರೆ.
ಏಕಮುಖ ಸಂಚಾರ ನಿಯಮ ಉಲ್ಲಂಘನೆ: ಕಾಮಗಾರಿ ಹಿನ್ನೆಲೆಯಲ್ಲಿ ವಿಟ್ಲ ಪೇಟೆಯಿಂದ ಮಂಗಳೂರು ಕಡೆಗೆ ತೆರಳುವ ವಾಹನಗಳು ನಾಲ್ಕು ಮಾರ್ಗದಿಂದ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಸಂಚರಿಸಿ ಮುಖ್ಯ ರಸ್ತೆಯನ್ನು ಸಂಪರ್ಕಿಸಬೇಕು. ಕಲ್ಲಡ್ಕ ಭಾಗದಿಂದ ಬರುವ ವಾಹನಗಳು ಏಕಮುಖ ಸಂಚಾರವನ್ನು ಮುಖ್ಯ ರಸ್ತೆಯಲ್ಲೇ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭ ಭಾರಿ ವಾಹನಗಳ ಸಂಚಾರವನ್ನು ಪರ್ಯಾಯ ರಸ್ತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಸೂಚನೆಗಳನ್ನು ಸರಿಯಾಗಿ ಪಾಲಿಸದೆ, ಅಧಿಕಾರಿಗಳ ಕಣ್ಣು ತಪ್ಪಿಸಿ ಭಾರಿ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ.
ರಸ್ತೆಯ ಇಕ್ಕೆಲಗಳಲ್ಲಿ ಹಿಂದೆ ಇದ್ದ ಕಾಲುವೆಗಳ ಮೇಲೆ ಸಣ್ಣ ಮೋರಿಗಳನ್ನು ಹಾಕಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ನೀರು ಹರಿಯಲು ಜಾಗವಿಲ್ಲದೆ ರಸ್ತೆಯಲ್ಲೇ ಹರಿಯುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕೆಂಬ ನಿಟ್ಟಿನಲ್ಲಿ ಮಳೆಗಾಲದಲ್ಲೇ ಪ್ರಾರಂಭಿಸಲಾಗಿದೆ. ಆದರೆ ಬುಧವಾರದಿಂದ ಮಳೆ ಬಿರುಸು ಪಡೆದುಕೊಂಡಿದ್ದು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ನೀರು ಶೇಖರಣೆಯಾಗಿ ಏಕಮುಖ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿನ ಜಾಗದ ತಕರಾರು ಜನಪ್ರತಿನಿಧಿಗಳ ನಿದ್ದೆ ಕೆಡಿಸಿದೆ.
ಪೊಲೀಸ್ ಇಲಾಖೆಗೆ ಪತ್ರ: ಸಾಮಾನ್ಯ ಸಭೆಯಲ್ಲಿ ಭಾರಿ ವಾಹನ ವಿಚಾರ ಪ್ರಸ್ತಾಪವಾಗಿದ್ದು ಮುಖ್ಯಾಧಿಕಾರಿ ಪೊಲೀಸ್ ನಿರೀಕ್ಷಕರಿಗೆ ಪತ್ರ ಬರೆದು, ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಘನ ವಾಹನ ಸಂಚಾರ ನಿಷೇಽಸಲು ಮನವಿ ಮಾಡಿದ್ದಾರೆ.
ತುತು ಕ್ರಮಕ್ಕೆ ಆಗ್ರಹ
ಪಟ್ಟಣ ಪಂಚಾಯಿತಿಯ ಚರಂಡಿಗಳ ದುರಸ್ತಿಗೆ ಎಲ್ಲ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಮಂಗಳೂರು ರಸ್ತೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಸ್ಥಳೀಯ ಅಗತ್ಯಗಳನ್ನು ಅರಿತುಕೊಳ್ಳದೆ, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಆರಂಭಿಸಲಾಗಿರುವ ರಸ್ತೆ ಕಾಮಗಾರಿಯಿಂದಾಗಿ ಬೊಬ್ಬೆಕೇರಿ ಪರಿಸರದಲ್ಲಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿzರೆ. ಈ ಕುರಿತು ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ತುರ್ತು ಜಂಟಿ ಸಭೆ ಕರೆದು ಕ್ರಮ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದರು.
ಭಾರಿ ಲಾರಿಗಳ ಸಂಚಾರದಿಂದ ಸಮಸ್ಯೆ
ಬೊಬ್ಬೆಕೇರಿಯಲ್ಲಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡಲು ಲೋಕೋಪಯೋಗಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಎರಡು ದಿನಗಳಿಂದ ಒಂದು ಭಾಗದ ರಸ್ತೆಯ ಕೆಲಸ ಪ್ರಾರಂಭವಾಗಿದ್ದು, ಜಲ್ಲಿ ಹಾಕಿ ಸಮತಟ್ಟು ಮಾಡಲಾಗಿದ್ದು ಇಲ್ಲಿ ಅಧಿಕ ಭಾರದ ಲಾರಿಗಳು ಸಂಚರಿಸಿ ರಸ್ತೆ ಹದಗೆಟ್ಟಿದೆ. ಕಾಮಗಾರಿಯೂ ವಿಳಂಬವಾಗುತ್ತಿದೆ. ಜಿಲ್ಲಾಧಿಕಾರಿಗಳು ಭಾರಿ ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆಯನ್ನು ಸೂಚಿಸಿ ಆದೇಶಿಸಿದ್ದರೂ ಪಾಲನೆಯಾಗುತ್ತಿಲ್ಲ.
ಕೃಷಿ ಕಾಲುವೆ ನಾಪತ್ತೆ
ದೇವಸ್ಥಾನದ ಪುಷ್ಕರಣಿಯಿಂದ ನೀರು ಹರಿದು ಕೃಷಿ ಚಟುವಟಿಕೆಗಳಿಗೆ ಬಳಸುವ ಕಾಲುವೆ ರಸ್ತೆಯ ಅಡಿಯಲ್ಲಿದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಹೊಸ ಕಟ್ಟಡಗಳ ನಿರ್ಮಾಣ ವೇಳೆ ಸೂಕ್ತ ಮೋರಿ ಅಳವಡಿಸದೆ ನೀರಿನ ಹರಿವಿಗೆ ತಡೆಯಾಗಿದೆ. ಈಗ ಇನ್ನೊಂದು ಭಾಗದಲ್ಲೂ ಕಾಲುವೆ ನಾಪತ್ತೆಯಾಗಿದ್ದು, ನೀರು ರಸ್ತೆಯಲ್ಲೇ ನಿಲ್ಲುತ್ತಿದೆ.
ಪರ್ಯಾಯ ರಸ್ತೆ ಬೃಹತ್‌ವಾಹನಕ್ಕೆ ಸೂಕ್ತವಲ್ಲ:
ಬೊಬ್ಬೆಕೇರಿಯಲ್ಲಿ ಕಾಮಗಾರಿಯ ಹಿನ್ನಲೆಯಲ್ಲಿ ನಾಲ್ಕು ಮಾರ್ಗದಿಂದ ದೇವಸ್ಥಾನ ಮುಂಭಾಗದ ರಸ್ತೆಗೆ ವಾಹನಗಳನ್ನು ಬಿಡಲಾಗುತ್ತಿದೆ. ಈ ರಸ್ತೆ ಕಿರಿದಾಗಿದ್ದು, ಇದರಲ್ಲಿ ರಾತ್ರಿ ೭೦ರಿಂದ ೧೦೦ ಲಾರಿಗಳು ಸಂಚರಿಸುತ್ತವೆ. ಈಗಾಗಲೇ ಸಣ್ಣಮೋರಿಗಳಲ್ಲಿ ಬಿರುಕು ಕಾಣಿಸಿದ್ದು, ದೇವಸ್ಥಾನದ ಪುಷ್ಕರಣಿ ತಡೆಗೋಡೆಗೂ ಅಪಾಯ ಎದುರಾಗಲಿದೆ. ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದೆ ಭಾರಿ ಅನಾಹುತ ಸಂಭವಿಸುವುದು ನಿಶ್ಚಿತ. ಪೊಲೀಸ್ ಇಲಾಖೆ ವಾಹನ ಸಂಚಾರದ ಬಗ್ಗೆ ನಿಗಾ ಇಡಬೇಕಿದೆ.
"
ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳದೆ, ಸ್ಥಳೀಯ ಸಮಸ್ಯೆಯನ್ನು ಅರಿತುಕೊಳ್ಳದೆ ಕಾಮಗಾರಿ ನಡೆಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಮೋರಿಗಳ ಅಳವಡಿಕೆಗೆ ಸೂಕ್ತ ಮಾನದಂಡ ಅನುಸರಿಸಬೇಕು. ಕೃಷಿ ಕಾಲುವೆ ಮುಚ್ಚಿದ್ದರೆ ಸ್ಥಳೀಯಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು.
— ಗಣೇಶ್, ವಾಹನ ಸವಾರ