ಕೊಡುಂಗಾಯಿಯಲ್ಲಿ ಮೈತ್ರೇಯಿ ಆಯುರ್ವೇದ ಗುರುಕುಲಂ ಹಾಗೂ ಮೈತ್ರೇಯಿ ಆಯುರ್ವೇದ ಆಸ್ಪತ್ರೆಗೆ ಶಿಲಾನ್ಯಾಸ ನಡೆಯಿತು. ಕರ್ನಾಟಕ ಸಂಸ್ಕೃತ ವಿವಿ ಉಪಕುಲಪತಿ ಡಾ.ಎಸ್.ಅಹಲ್ಯಾ, ಡಾ.ಸುಧಾ ರಾವ್, ಸುಬ್ರಾಯ ಪೈ, ರಾಜೇಶ್ ನಾಕ್ ಇತರರು ಇದ್ದರು.  vittal
ದಕ್ಷಿಣ ಕನ್ನಡ

ಭಾರತೀಯ ಜ್ಞಾನ ಪರಂಪರೆಗೆ ಹೊಸ ಆಯಾಮ VITTAL

ಡಾ.ಎಸ್.ಅಹಲ್ಯಾ ಅಭಿಮತ | ಮೈತ್ರೇಯಿ ಆಯುರ್ವೇದ ಗುರುಕುಲಂಗೆ ಶಿಲಾನ್ಯಾಸ

ವಿಟ್ಲ: ಭಾರತೀಯ ಜ್ಞಾನ ಪರಂಪರೆ ಮತ್ತು ಆಯುರ್ವೇದದ ಪುನರುತ್ಥಾನವಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ, ಆಯುಷ್ ಮಂತ್ರಾಲಯ ಸ್ಥಾಪನೆಯ ಬಳಿಕ ಭಾರತೀಯ ಜ್ಞಾನ ಪರಂಪರೆಗೆ ಹೊಸ ಆಯಾಮ ಮತ್ತು ಜಾಗೃತಿ ದೊರೆತಿದೆ. ಮೈತ್ರೇಯಿ ಗುರುಕುಲದಲ್ಲಿ ನೈಸರ್ಗಿಕ ವಾತಾವರಣದ ಜತೆಗೆ ಗಿಡಮೂಲಿಕೆಗಳ ನೇರ ಪರಿಚಯ ಹಾಗೂ ಪ್ರತ್ಯಕ್ಷ ಜ್ಞಾನ ಶಿಕ್ಷಣಕ್ಕೆ ಪೂರಕವಾಗುತ್ತದೆ. ಶಾಸ್ತ್ರವನ್ನು ನಿಜವಾದ ಭಾಷೆಯಲ್ಲಿ ಅಧ್ಯಯನ ಮಾಡಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಅಹಲ್ಯಾ ಹೇಳಿದರು.

ಬುಧವಾರ ಕೊಡುಂಗಾಯಿಯಲ್ಲಿ ಅಜೇಯ ಟ್ರಸ್ಟ್ ವತಿಯಿಂದ ನಿರ್ಮಾಣಗೊಳ್ಳಲಿರುವ ಮೈತ್ರೇಯಿ ಆಯುರ್ವೇದ ಗುರುಕುಲಂ (ಪೂರ್ವ ಆಯುರ್ವೇದ ಶಿಕ್ಷಣ ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ) ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದರು.

ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿ, ಆಯುರ್ವೇದವನ್ನು ಸಂಸ್ಕೃತದಲ್ಲಿ ಕಲಿತರೆ ಮಾತ್ರ ಅದರ ಪೂರ್ಣ ಸತ್ವವನ್ನು ಪಡೆಯಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಗುರುಕುಲ ಪದ್ಧತಿಯ ಮೂಲಕ ಶಿಕ್ಷಣ ಪ್ರಾರಂಭವಾಗುತ್ತಿರುವುದು ಹೆಮ್ಮಯ ವಿಚಾರ ಎಂದರು.

ಸಂಸ್ಕೃತ ಭಾರತಿ ರಾಷ್ಟ್ರೀಯ ಕಾರ್ಯಕಾರಿಣಿಯ ದಿನೇಶ್ ಕಾಮತ್, ಗುರುಕುಲ ಪ್ರಕಲ್ಪದ ಅಖಿಲ ಭಾರತ ಸಂಯೋಜಕ ಕೋಟೆ ಮನೆ ರಾಮಚಂದ್ರ ಭಟ್ ಉಪಸ್ಥಿತರಿದ್ದರು.

ಗುರುಕುಲಂನ ಆಡಳಿತ ಮಂಡಳಿ ಅಧ್ಯಕ್ಷೆ ಡಾ.ಸುಧಾ ರಾವ್ ಸ್ವಾಗತಿಸಿದರು. ಮೈತ್ರೇಯಿ ಆಯುರ್ವೇದ ಗುರುಕುಲಂನ ಪ್ರಾಂಶುಪಾಲ ಡಾ.ರವಿಗಣೇಶ್ ಮೊಗ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜೇಯ ಟ್ರಸ್ಟ್‌ನ ಅಧ್ಯಕ್ಷ ಸುಬ್ರಾಯ ಪೈ ವಂದಿಸಿದರು. ಪ್ರತ್ನಸಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.