ಕುರುಂಬಳದಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸೋಟ ಪ್ರಕರಣದಲ್ಲಿ ಸಿಲಿಂಡರ್ ಕಬ್ಬಿಣದ ತಗಡಾಗಿ ಪರಿವರ್ತನೆಯಾಗಿರುವುದು.
- ವಿವಿಧ ಇಲಾಖೆಗಳಿಂದ ತನಿಖೆ
- ನೈಜ ವಿಚಾರ ಮುಚ್ಚಿಡುವ ಹುನ್ನಾರ?
ವಿಟ್ಲ: ಕುರುಂಬಳದಲ್ಲಿ ನಡೆದ ಗ್ಯಾಸ್ ಸೋಟ ಪ್ರಕರಣದ ನೈಜ ವಿಚಾರವನ್ನು ಮುಚ್ಚಿಡಲು ಗ್ಯಾಸ್ ರೀ ಫಿಲ್ಲಿಂಗ್ ದಂಧೆಯ ಆರೋಪ ಕೇಳಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳ ತಂಡ ಮನೆಯಲ್ಲಿ ತಪಾಸಣೆ ನಡೆಸಿದೆ. ಮನೆಯಲ್ಲಿ ಸುಟ್ಟು ಕರಕಲಾಗಿರುವ ಹಾಗೂ ಛಿದ್ರವಾಗಿರುವುದು ಎರಡೂ ಒಂದೇ ರೀತಿಯ ಸಿಲಿಂಡರ್ ಆಗಿದ್ದು, ವಾಣಿಜ್ಯ ಬಳಕೆಯದ್ದಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿದ್ದ ಮಹಿಳೆಯ ಹೇಳಿಕೆಯನ್ನು ಪಡೆದ ಪೊಲೀಸರು ಗ್ಯಾಸ್ ಸಿಲಿಂಡರ್‌ಗಳ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಎರಡು ಸಿಲಿಂಡರ್‌ಗಳಿದ್ದು, ಬಳಕೆಯಲ್ಲಿದ್ದ ಸಿಲ್ಲಿಂಡರ್‌ನಲ್ಲಿ ಗ್ಯಾಸ್ ಇದ್ದರೆ, ಇನ್ನೊಂದು ಖಾಲಿ ಸಿಲಿಂಡರ್ ಎಂದು ಹೇಳಲಾಗಿದೆ. ಘಟನೆಯಲ್ಲಿ ಒಂದು ಸಿಲಿಂಡರ್ ಸಂಪೂರ್ಣ ಛಿದ್ರವಾಗಿದೆ. ರೆಗ್ಯುಲೇಟರ್ ನಾಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಗ್ಯಾಸ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳೂ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಗ್ಯಾಸ್ ಏಜೆನ್ಸಿ ಮಾಲೀಕರು ಹಾನಿಗೊಳಗಾದ ಮನೆಯಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ದಂಧೆ ನಡೆಸುತ್ತಿದ್ದರೆಂಬ ಆರೋಪ ಮಾಡಿದ್ದು ಅಚ್ಚರಿ ಮೂಡಿಸಿದೆ. ಸದ್ಯ ಮನೆ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಮರ್ಪಕವಾಗಿ ಸಿಗುತ್ತಿರುವ ಕಾರಣ ಫಿಲ್ಲಿಂಗ್ ಮಾಡುವ ಉದ್ದೇಶ ಏನೆಂಬ ಪ್ರಶ್ನೆ ಮೂಡಿದೆ. ಸಾರ್ವಜನಿಕ ವಲಯದಲ್ಲಿ ಗ್ಯಾಸ್ ಸಿಲಿಂಡರ್ ಚರ್ಚೆ ತೀವ್ರವಾಗುತ್ತಿದ್ದು, ಘಟನೆ ಇನ್ನೊಂದು ಆಯಾಮಕ್ಕೆ ತಿರುಗುವ ಮುನ್ನ ಸೂಕ್ತ ತನಿಖೆಯಾಗಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಹಿಂದಿನ ಘಟನೆಗಳಿಗೆ ಇನ್ನೂ ಸಿಗದ ಪರಿಹಾರ!
೨೦೧೯ರ ಆ.೨೯ರಂದು ಕುದ್ದುಪದವು ರಾಮಕ್ಕ ಎಂಬುವರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಸೋಟಗೊಳ್ಳುವ ಮೊದಲೇ ಸಿಲಿಂಡರ್ ಹೊರಗೆ ತರಲಾಗಿತ್ತು. ಆದರೂ ಮನೆಯೊಳಗೆ ತುಂಬಿಕೊಂಡ ಗ್ಯಾಸ್‌ಗೆ ಬೆಂಕಿ ಹಿಡಿದು, ಬಟ್ಟೆ ಬರೆ, ಅಕ್ಕಿ ಚೀಲ ಸೇರಿ ಪ್ಲಾಸ್ಟಿಕ್ ವಸ್ತುಗಳು ಸಂಪೂರ್ಣ ಹಾನಿಗೀಡಾಗಿದ್ದವು. ೨೦೨೦ರ ಜುಲೈ ೩೦ರಂದು ಉಕ್ಕುಡ ದರ್ಬೆ ಯೂಸುಫ್ ಎಂಬುವರ ಮನೆಯಲ್ಲಿ ಅನಿಲ ಸೋರಿಕೆಯಾಗಿ ಮನೆಯ ಎರಡು ಕೋಣೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ೨೦೨೨ ಜನವರಿಯಲ್ಲಿ ಚಂದಳಿಕೆ ನಿವಾಸಿ ವಿಠಲ ಎಂಬರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿಗೆ ಎರಡು ಕಾಲು ಸುಟ್ಟು ಹೋಗಿತ್ತು. ಆದರೆ ಈವರೆಗೂ ಇವರಿಗೆ ಪರಿಹಾರ ಸಿಕ್ಕಿಲ್ಲ.
ಗ್ಯಾಸ್ ಸಿಲಿಂಡರ್ ಸೋಟಗಳಿಂದ ಗ್ರಾಮೀಣ ಭಾಗದ ಜನರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಹೆಚ್ಚಿನ ಮನೆಗಳಲ್ಲಿ ಬೆಳಗ್ಗಿನ ಸಮಯ ಒಂಟಿ ಮಹಿಳೆಯರಿರುತ್ತಾರೆ. ಸಮರ್ಪಕ ಪರಿಶೀಲನೆಯಿಲ್ಲದೆ ಏಜೆನ್ಸಿ ಸಿಲಿಂಡರ್ ಇಟ್ಟು ಹೋಗುವುದರಿಂದ ಅಪಾಯಗಳಾದರೂ ತಿಳಿಯದ ಸ್ಥಿತಿಯಿದೆ. ಸಂಬಂಧಪಟ್ಟವರು ಸಿಲಿಂಡರ್‌ಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಸುರಕ್ಷೆಗೆ ಆದ್ಯತೆ ನೀಡಬೇಕಾಗಿದೆ.