ಸರ್ಕಾರಿ ರಜೆಯ ದಿನ ಆಸ್ಪತ್ರೆಯ ಒಂದು ಭಾಗವನ್ನು ಬೀಗ ಹಾಕಿ ಮುಚ್ಚಿರುವುದು. 
ದಕ್ಷಿಣ ಕನ್ನಡ

ವಿಟ್ಲ ಆರೋಗ್ಯ ಕೇಂದ್ರ ರೋಗಗ್ರಸ್ತ VITTAL

ಖಾಸಗಿ ಸಹಭಾಗಿತ್ವದ ನಂತರವೂ ರೋಗಿಗಳಿಗೆ ಸಕಾಲದಲ್ಲಿ ಸಿಗದ ಚಿಕಿತ್ಸೆ * ಗ್ರಾಮೀಣ ಜನರಿಗೆ ಮರೀಚಿಕೆಯಾದ ಆರೋಗ್ಯ ಸೇವೆ

ವಿಟ್ಲ: ಮೂಲಸೌಕರ್ಯಗಳ ಕೊರತೆಯ ನೆಪ ಹೇಳಿ ರೋಗಿಗಳಿಗೆ ಸೇವೆ ನೀಡುವುದನ್ನು ಸ್ಥಗಿತಗೊಳಿಸಿದ್ದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ವನ್ನು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲಾಗುತ್ತಿದೆ. ಆದರೂ ಆರೋಗ್ಯ ಕೇಂದ್ರ ಇನ್ನೂ ರೋಗಗ್ರಸ್ತ ಸ್ಥಿತಿಯಲ್ಲೇ ಇದ್ದು ಬಡ ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಮರೀಚಿಕೆಯಾಗುತ್ತಿದೆ.

ಸವಲತ್ತುಗಳು ಇದ್ದರೂ ಇಲ್ಲವೆಂದು ಹೇಳುತ್ತ ರೋಗಿಗಳಿಗೆ ಸಮರ್ಪಕ ಸೇವೆ ನೀಡದಿರುವುದು, ಸಣ್ಣಪುಟ್ಟ ಪ್ರಕರಣಗಳಿಗೂ ದೂರದ ಪುತ್ತೂರು ಮತ್ತು ಮಂಗಳೂರಿಗೆ ರೋಗಿಗಳನ್ನು ವರ್ಗಾಯಿಸುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

*ತಜ್ಞ ವೈದ್ಯರ ಗೈರು, ಸಮಯ ಪಾಲನೆ ಕೊರತೆ: ಹೊರರೋಗಿ ವಿಭಾಗದಲ್ಲಿ (ಒಪಿಡಿ) ಸಾಮಾನ್ಯ ವೈದ್ಯಕೀಯ ಸೇವೆ (ಸೋಮವಾರದಿಂದ ಶನಿವಾರ), ಮಕ್ಕಳ ವಿಭಾಗ (ಸೋಮವಾರ, ಮಂಗಳವಾರ, ಗುರುವಾರ), ಸೀರೋಗ (ಸೋಮವಾರ, ಗುರುವಾರ, ಶುಕ್ರವಾರ) ಮೂಳೆ ಮತ್ತು ಕೀಲು ವಿಭಾಗ (ಮಂಗಳವಾರ), ಕಣ್ಣು (ಮಂಗಳವಾರ, ಶುಕ್ರವಾರ)ಹಾಗೂ ಚರ್ಮ ವಿಭಾಗ (ಬುಧವಾರ, ಶುಕ್ರವಾರ)ಗಳ ವೇಳಾಪಟ್ಟಿಯನ್ನು ಆಸ್ಪತ್ರೆಯ ಬಾಗಿಲಿಗೆ ಅಂಟಿಸಲಾಗಿದೆ. ಬೆಳಗ್ಗೆ ೯ರಿಂದ ಮಧ್ಯಾಹ್ನ ೧ರವರೆಗೆ ಹಾಗೂ ಮಧ್ಯಾಹ್ನ ೧.೪೫ರಿಂದ ಸಂಜೆ ೪.೩೦ರವರೆಗೆ ಸೇವೆ ಲಭ್ಯವಿರಬೇಕಿದ್ದರೂ, ಕೆಲವು ವಿಭಾಗಗಳ ತಜ್ಞರು ಮಧ್ಯಾಹ್ನವೇ ತೆರಳುವುದು ಮತ್ತು ನಿಗದಿತ ದಿನಗಳಲ್ಲೂ ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡುಬಂದಿದೆ. ತುರ್ತು ಸಂದರ್ಭದಲ್ಲೂ ರೋಗಿಗಳು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯಾಧಿಕಾರಿಯೂ ಇಲ್ಲದೆ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.

ಆರೋಗ್ಯ ಸಚಿವರ ತವರು ಕ್ಷೇತ್ರದ ಆಸ್ಪತ್ರೆಯ ಸ್ಥಿತಿ ಹೀಗಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿzರೆ. ಈ ಕುರಿತು ಜಿ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂದು ದೂರಲಾಗಿದೆ.

ಸಣ್ಣ ಪ್ರಕರಣಗಳಿಗೂ ವರ್ಗಾವಣೆ

ಹೆರಿಗೆ ಸೇರಿದಂತೆ ಸಣ್ಣಪುಟ್ಟ ಶಸಚಿಕಿತ್ಸೆಗಳನ್ನು ನಡೆಸಲು ಆಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ ಸಣ್ಣ ಗಾಯಗಳಿಗೆ ಬ್ಯಾಂಡೇಜ್ ಹಾಕುವಲ್ಲೂ ನಿರ್ಲಕ್ಷ್ಯ ತೋರಲಾಗುತ್ತಿದೆ. ರೋಗಿಗಳನ್ನು ದೂರದ ಪುತ್ತೂರು ಅಥವಾ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂಬ ಆರೋಪವಿದೆ.

ಒಳರೋಗಿ ವಿಭಾಗ ಸ್ಥಗಿತ

ಹತ್ತಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಇದ್ದರೂ ಕಳೆದ ಕೆಲವು ವರ್ಷಗಳಿಂದ ಒಳರೋಗಿ ದಾಖಲಾತಿ ಸೇವೆ ಸ್ಥಗಿತಗೊಂಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಯನ್ನು ನಡೆಸಲು ಪ್ರಾರಂಭಿಸದ ಬಳಿಕವೂ ಒಳರೋಗಿಗಳ ವಿಭಾಗ ಕಾರ್ಯಾಚರಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಭಾನುವಾರ ಗೇಟಿಗೆ ಬೀಗ

ಸಮುದಾಯ ಆರೋಗ್ಯ ಕೇಂದ್ರಕ್ಕೆ ಗ್ರಾಮೀಣ ಭಾಗದಿಂದ ಆಗಮಿಸುವ ಜನರಿಗೆ ಸರ್ಕಾರಿ ರಜೆ ಹಾಗೂ ಭಾನುವಾರದಂದು ವೈದ್ಯರು ಸೇವೆಯಲ್ಲಿ ಇರದ ಕಾರಣ ಚಿಕಿತ್ಸೆ ಸಿಗುತ್ತಿಲ್ಲ. ತುರ್ತು ವಿಭಾಗದ ಗೇಟ್ ಹೊರತುಪಡಿಸಿ ಆಸ್ಪತ್ರೆಗೇ ಬೀಗ ಹಾಕಲಾಗುತ್ತಿದೆ. ಬೆರಳೆಣಿಕೆ ಸಿಬ್ಬಂದಿ ಹೊರತು ಕೆಲವೊಂದು ದಿನಗಳಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಇರುವುದೇ ಇಲ್ಲ. ಇದರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ತೊಂದರೆಯಾಗುತ್ತಿದೆ. ಆಸ್ಪತ್ರೆಯ ಸುಗಮ ನಿರ್ವಹಣೆಗಾಗಿ ರಚಿಸಲಾದ ಆರೋಗ್ಯ ರಕ್ಷಾ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಕೇವಲ ನಾಲ್ಕು ಸಭೆಗಳನ್ನು ನಡೆಸಿರುವುದು ಆಡಳಿತಾತ್ಮಕ ಅಸಡ್ಡೆಯನ್ನು ತೋರಿಸುತ್ತಿದೆ.

ಶನಿವಾರ ಬೆಳಗ್ಗೆ ೯ ಗಂಟೆಗೆ ಔಷಧ ವಿಭಾಗದಲ್ಲಿ ಯಾರೊಬ್ಬರೂ ಇಲ್ಲದಿರುವುದು.
ವಿಟ್ಲ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯ ಜತೆಗೆ ಸೇರಿಕೊಂಡು ನಡೆಸಲಾಗುತ್ತಿದೆ. ಬೆಳಗ್ಗೆ ೯ರಿಂದ ಸಂಜೆ ೪.೩೦ರವರೆಗೆ ಸಿಬ್ಬಂದಿ ಇರಬೇಕು. ಈ ಬಗ್ಗೆ ಸಮಸ್ಯೆಯಾಗುತ್ತಿರುವುದನ್ನು ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಲಾಗುವುದು. ನಾನು ಸದ್ಯ ರಜೆಯಲ್ಲಿದ್ದು ಡಿಸೆಂಬರ್ ಮೊದಲ ವಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಡಾ.ಎಚ್.ಆರ್.ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ