ವಿಟ್ಲ: ದೇಶ ಬಹಳಷ್ಟು ಮುಂದುವರಿಯುತ್ತಿದ್ದು, ಸಂಸ್ಕಾರದ ಕೊರತೆಯಿಂದ ಸಂಬಂಧಗಳು ಕ್ಷೀಣಿಸುತ್ತಿವೆ. ಮಕ್ಕಳು ಉತ್ತಮ ಸಂಸ್ಕೃತಿ ಮೈಗೂಡಿಸಿಕೊಳ್ಳುವ ಜತೆಗೆ ಪಾಲಕರಿಂದ ಸರಿಯಾದ ಮೌಲ್ಯ ತುಂಬಬೇಕಾಗಿದೆ. ಸಂಸ್ಕಾರ, ಸಂಸ್ಕೃತಿ, ನಂಬಿಕೆಯಿಂದ ಯುವ ಸಮಾಜ ವಿಮುಖವಾಗುತ್ತಿದೆ. ಉತ್ತಮ ಕಾರ್ಯಕ್ರಮಗಳಿಂದ ಯುವ ಶಕ್ತಿ ದೂರವಾಗುತ್ತಿರುವುದು ಆತಂಕಕಾರಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಚಿರಂತನ ಚಾರಿಟೆಬಲ್ ಟ್ರಸ್ಟ್‌ನ ಶಾಖೆ ಅಪ್ಪೆರಿಪಾದೆ ಆಲಂಬನದಲ್ಲಿ ದೇರಾಜೆ ಸೀತಾರಾಮಯ್ಯ ರಂಗ ಮಂದಿರ ಹಾಗೂ ಸಪ್ತಕ ವೇದಿಕೆಯ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಿದರು.
ವೃದ್ಧರ ಅನುಕೂಲಕ್ಕಾಗಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಕೊಡುಗೆಯಾಗಿ ನೀಡಿದ ಲಿಫ್ಟ್ ಲೋಕಾರ್ಪಣೆ ಮಾಡಲಾಯಿತು. ವಿಟ್ಲದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಘಟಕ ಕೊಡುಗೆ ನೀಡಲಾಯಿತು.
ಬೆಂಗಳೂರು ಸಪ್ತಕದ ಜಿ.ಎಸ್.ಹೆಗಡೆ, ಟ್ರಸ್ಟಿ ಶಿವಾನಂದ ರೈ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು. ನಿಹಾರಿಕಾ ದೇರಾಜೆ, ಪಾಣಿನಿ ದೇರಾಜೆ ಪ್ರಾರ್ಥಿಸಿದರು. ದೇರಾಜೆ ಕುಟುಂಬದ ಮೂರ್ತಿ ದೇರಾಜೆ ಸ್ವಾಗತಿಸಿದರು. ಟ್ರಸ್ಟಿ ಭಾರವಿ ದೇರಾಜೆ ಪ್ರಸ್ತಾವನೆಗೈದರು. ತೇಜಸ್ವಿ ಜೂನಿಯರ್ ಶಂಕರ್ ವಂದಿಸಿದರು.
ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ, ಮದ್ದಳೆಯಲ್ಲಿ ಚೈತನ್ಯ ಕೃಷ್ಣ ಪದ್ಮಾಣ, ಶ್ರೀಧರ ವಿಟ್ಲ, ಅರ್ಥಧಾರಿಗಳಾಗಿ ವಾಸುದೇವ ರಂಗ ಭಟ್, ವಿಷ್ಣು ಶರ್ಮ ವಾಟೆಪಡ್ಪು, ಹರೀಶ ಬಳಂತಿಮುಗರು ಭಾಗವಹಿಸಿದರು.
ಕೂಡುಕುಟುಂಬದಲ್ಲಿ ಬೆಳೆದ ಮಕ್ಕಳಿಗೆ ಹಂಚುವ ಗುಣ ಬಾಲ್ಯದಿಂದ ಇರುತ್ತದೆ. ಎಲ್ಲರೂ ಜತೆಯಾಗಿರುವ ಕುಟುಂಬದಿಂದ ಉತ್ತಮ ಸಂಸ್ಕಾರ ಸಿಗಲು ಸಾಧ್ಯ. ಸಂಸ್ಕಾರವನ್ನು ಹಚ್ಚುವ ಕಾರ್ಯ ನಿರಂತರವಾಗಿ ನಡೆಯಬೇಕು. ಜೀವನದಲ್ಲಿ ಛಲ ಹಾಗೂ ಗುರಿ ಮುಖ್ಯ. ಸಪ್ತಕ ಸಾಂಸ್ಕೃತಿಕ ವೇದಿಕೆಯಾಗಿ ವಿಟ್ಲ ಜನತೆಗೆ ಲಭಿಸುವಂತಾಗಲಿ.ಜಿ.ಎಸ್.ಹೆಗಡೆ, ಸಪ್ತಕ ಬೆಂಗಳೂರು