ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು. 
ದಕ್ಷಿಣ ಕನ್ನಡ

ಜನರ ಸಮಸ್ಯೆ, ಭಾವನೆ ಅರ್ಥೈಸಿಕೊಳ್ಳಲು ಭೇಟಿ

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಕರಾವಳಿ ಜನರ ಆಶಯದಂತೆ ಕರಾವಳಿಗೆ ಏನು ಮಾಡಬೇಕಿತ್ತು ಅದನ್ನು ಮಾಡಿದ್ದೇನೆ. ದಿನನಿತ್ಯ ಜೀವನದಲ್ಲಿ ಜನರು ಅನುಭವಿಸುವಂತಹ ಕಷ್ಟ ಹಾಗೂ ಅವರ ಭಾವನೆಗಳ ಅರ್ಥ ಮಾಡಿಕೊಳ್ಳಲು ಕರಾವಳಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಹೆಬ್ರಿಗೆ ಶುಕ್ರವಾರ ಹೆಲಿಪ್ಯಾಡ್ ಮೂಲಕ ಬಂದ ಮುಖ್ಯಮಂತ್ರಿಗೆ ಜಿಲ್ಲಾಡಳಿತ ವತಿಯಿಂದ ನೀಡಲಾದ ಗೌರವರಕ್ಷೆ ಸ್ವೀಕರಿಸಿ ಮಾತನಾಡಿದರು.

5,000ಕ್ಕೂ ಅಧಿಕ ಸಹಿ ಸಂಗ್ರಹ

ಕಸ್ತೂರಿ ರಂಗನ್ ವರದಿಯಿಂದ ಭಯ ಬೀತರಾಗಿರುವ 24 ಗ್ರಾಮ ಪಂಚಾಯಿತಿಗಳಿಂದ 5,000ಕ್ಕಿಂತ ಹೆಚ್ಚು ಮಂದಿ ಸಹಿ ಮಾಡಿರುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಮಲೆಕುಡಿಯ ಸಮುದಾಯ, ಕೈಗಾರಿಕೆ, ಗಣಿಗಾರಿಕೆ, ಗುತ್ತಿಗೆದಾರರು, ವಿವಿಧ ಸಂಘ-ಸಂಸ್ಥೆಗಳು, ಹೆಬ್ರಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ 200ಕ್ಕಿಂತ ಅಧಿಕ ಮನವಿ ಪಾತ್ರಗಳು ಸಿಎಂ ಕೈ ಸೇರಿತ್ತು.

ಸಾಂಪ್ರದಾಯಿಕ ವ್ಯವಸ್ಥೆ

ಹೆಲಿಪ್ಯಾಡ್‌ನಲ್ಲಿ ಸಾಂಪ್ರಾದಾಯಿಕವಾಗಿ ಸಗಣಿ ಸಾರಿಸಲಾಗಿತ್ತು. ಇದರಿಂದಾಗಿ ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ಧೂಳು ಇರಲಿಲ್ಲ.

ಕಿಕ್ಕಿರಿದು ಸೇರಿದ ಜನಸಂಖ್ಯೆ

ಜಿಲ್ಲೆಯ ಕೆಲವು ತಾಲೂಕುಗಳಿಂದ ಕಿಕ್ಕಿರಿದು ಬಂದು ಜನ ಸೇರಿದ್ದರು. 8,000ಕ್ಕಿಂತ ಅಧಿಕ ಮಂದಿ ಜಮಾಯಿಸಿದ್ದರು. 5,000 ಕುರ್ಚಿ ತುಂಬಿ, 3,000ಕ್ಕಿಂತ ಅಧಿಕ ಮಂದಿ ನಿಂತು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಜನರಿಂದಲೇ ಮಾಧ್ಯಮ ಗ್ಯಾಲರಿ ತುಂಬಿ ತುಳುಕಿತ್ತು. ಇದರಿಂದ ಕೆಲವು ಪ್ರತಿನಿಧಿಗಳು ನಿಂತು ಕರ್ತವ್ಯ ನಿರ್ವಹಿಸಿದರು. ಹೆಬ್ರಿಯ ಟ್ವಿಂಕಲ್ ಆಗ್ರೋ ಕೇರ್ ವತಿಯಿಂದ 8,000 ಮಂದಿಗೆ ಪಾನೀಯ, ಲಸ್ಸಿ, ಕುಡಿಯುವ ನೀರು ನೀಡಲಾಯಿತು.

ಕಾದು ಕುಳಿತ ಜನರು

ಮಧ್ಯಾಹ್ನ 12.30ರಿಂದ ಜನರು ದೌಡಯಿಸಿದ್ದರು. ಸಂಜೆ 4.45ಕ್ಕೆ ಸಿಎಂ ಬರುವಾಗ ಕಾದು ಸುಸ್ತಾದರೂ 7 ಗಂಟೆವರೆಗೆ ಕಾರ್ಯಕ್ರಮ ವೀಕ್ಷಿಸಿದರು. 10 ಕೌಂಟರ್‌ಗಳ ಮೂಲಕ ಉಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. 6,500 ಮಂದಿ ಅನ್ನ, ಪಲ್ಯ, ಸಾರು, ಪಾಯಸ, ಮಜ್ಜಿಗೆಯ ವಿಶೇಷ ಭೋಜನ ಸವಿದರು.

ಸ್ವಾಗತ

ಕರಾವಳಿಯ ಐವರು ಶಾಸಕರು, ಹಾಗೂ ಸಂಸದರು ಹೆಲಿಪ್ಯಾಡ್‌ನಲ್ಲಿ ಸಿಎಂ ಅವರನ್ನು ಬರಮಾಡಿಕೊಂಡರು. ಇವರೊಂದಿಗೆ ಕಾಂಗ್ರೆಸ್ ನಾಯಕರಿದ್ದರು.

ಸರ್ಕಾರಿ ಬಸ್‌ಗಳ ದಂಡು

ಹೆಬ್ರಿಯಲ್ಲಿ ಇಂದಿನವರೆಗೆ ಕೇವಲ ಬೆರಳೆಣಿಕೆಯ ಬಸ್ ನೋಡಿದ್ದ ಜನರು ಇಂದು ಸರ್ಕಾರಿ ಬಸ್‌ಗಳು ಸಾಲುಸಾಲಾಗಿ ಬಂದಿರುವುದನ್ನು ಕಂಡರು. 80 ಬಸ್ಸುಗಳಲ್ಲಿ ಜನರು ಬಂದಿದ್ದರು.

500 ಮಂದಿ ಬಂದೋಬಸ್ತ್

ಜಿಲ್ಲೆಯಲ್ಲಿ ವಿವಿಧಡೆ ಗಣೇಶೋತ್ಸವ ಇರುವುದರಿಂದ 500 ಮಂದಿ ಸಿಬ್ಬಂದಿಯನ್ನು ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿ ಬಂದೋಬಸ್ತ್ ಮಾಡಿದ್ದೇವೆ ಎಂದು ಎಸ್‌ಪಿ ಹರಿರಾಮ ಶಂಕರ್ ‘ವಿಜಯವಾಣಿ’ಗೆ ತಿಳಿಸಿದರು.

ವಿಶೇಷ ಗೌರವ

ನಾರಾಯಣ ಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರು ನಾರಾಯಣ ಗುರು ಪ್ರತಿಮೆಯನ್ನು ಸಿಎಂ ಅವರಿಗೆ ನೀಡಿದರು. ಕೊರಗ ಸಮುದಾಯದ ಮುಖಂಡರಾದ ಸುಶೀಲು ನಾಡ ವಿಶೇಷ ಗೌರವ ಸಲ್ಲಿಸಿದರು.

ರೈತರ ಘೋಷಣೆಗೆ ಜಗ್ಗಿದ ಸಿಎಂ

ಬೈಂದೂರಿನಲ್ಲಿ 403 ದಿನಗಳಿಂದ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶವನ್ನು ಸೇರಿಸಬಾರದೆಂದು ಪ್ರತಿಭಟನೆ ನಡೆಯುತ್ತಿದೆ. ಮುಖ್ಯಮಂತ್ರಿ ಸಭೆಯಲ್ಲಿ 1,500 ಮಂದಿ ರೈತರು ನಮ್ಮ ಸಮಸ್ಯೆಯನ್ನು ಆಲಿಸುವಂತೆ ಘೋಷಣೆ ಕೂಗಿದಾಗ, ಹೊರಡಲು ಸಿದ್ಧರಾಗಿದ್ದ ಸಿಎಂ ಮರಳಿ ಬಂದು ರೈತರ ಸಮಸ್ಯೆ ಆಲಿಸಿ, ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿ, ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮನವಿ ಸಲ್ಲಿಸಲು ಮುಗಿ ಬಿದ್ದ ಜನ

ಮುಖ್ಯಮಂತ್ರಿಗಳು ಜನರು ಇದ್ದ ಸ್ಥಳಕ್ಕೆ ಮನವಿ ಸ್ವೀಕರಿಸಲು ಬಂದಾಗ ಜನರು ಮುಗಿಬಿದ್ದರು. ಮುಖ್ಯಮಂತ್ರಿಗಳು ಓಡೋಡಿ ಬಂದು ಎಲ್ಲರ ಮನವಿಗಳನ್ನು ಸ್ವೀಕರಿಸಿದಾಗ ಜನರು ಜೈಕಾರ ಕೂಗಿದರು. ಪಕ್ಷಭೇದ ಮರೆತು ಜನ ಸೇರಿದ್ದರು.